ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಆದರೆ ಭಾರತಕ್ಕೆ ಹಿಂದಿರುಗಿ ಸೇವೆ ಸಲ್ಲಿಸಿ
ಮೈಸೂರು, ನವೆಂಬರ್-ಶೇ.70 ರಷ್ಟು ವೈದ್ಯರು ನಗರಗಳಲ್ಲಿ ನೆಲೆಸಲು ಬಯಸುತ್ತಾರೆ. ಆದರೆ ಶೇ.70 ರಷ್ಟು ಜನರು ಹಳ್ಳಿಗಳಲ್ಲಿ ಜೀವಿಸುತ್ತಿದ್ದು, ಇವರಿಗಾಗಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರ್ಷ 2,500 ವೈದ್ಯರು ವ್ಯಾಸಂಗ ಮುಗಿಸಲಿದ್ದಾರೆ. ಮಾನವೀಯತೆ ಹಾಗೂ ಜವಾಬ್ದಾರಿಯಿಂದ ಈ ಅಂಶ ಮನಗಂಡು, ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕು” ಎಂದು ಕೋರಿದರು.
“ಕೆಲ ವೈದ್ಯರು ಈ ನಿಯಮ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂತಹವರು ಪ್ರಕರಣ ಹಿಂಪಡೆದು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು. ಹೊರ ದೇಶಗಳ ಸಂಸ್ಥೆಗಳಲ್ಲೂ ವ್ಯಾಸಂಗ ಮಾಡಬಹುದು. ಆದರೆ ಮರಳಿ ಬಂದು ನಮ್ಮ ದೇಶದಲ್ಲೇ ಸೇವೆ ಸಲ್ಲಿಸಬೇಕು” ಎಂದರು.
“ರಾಜ್ಯದಲ್ಲಿ 11-12,000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಸಾವಿರ ಜನರಿಗೆ ಒಂದು ಹಾಸಿಗೆ ಸೌಲಭ್ಯವಿದೆ. 1 ಸಾವಿರ ಜನರಿಗೆ ಒಬ್ಬ ವೈದ್ಯ ಹಾಗೂ ಒಂದು ಸಾವಿರ ಜನರಿಗೆ 2.7 ಹಾಸಿಗೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 150 ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದ್ದಾರೆ. ಸ್ನಾತಕೋತ್ತರಕ್ಕೆ ಹೊಸದಾಗಿ 17,000 ಸೀಟುಗಳನ್ನು ಸೇರಿಸಲಾಗಿದೆ. ಇವೆಲ್ಲ ಕ್ರಮಗಳಿಂದ ಆರೋಗ್ಯ ಕ್ಷೇತ್ರ ಬಲವಾಗಿದೆ” ಎಂದು ವಿವರಿಸಿದರು.
“ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಜಾಗತಿಕ ಕೋವಿಡ್ ಮರಣ ಪ್ರಮಾಣ ಶೇ.3.5 ರಿಂದ 3.8 ರಷ್ಟಿದೆ. ದೇಶದಲ್ಲಿ ಶೇ.1.4 ಹಾಗೂ ರಾಜ್ಯದಲ್ಲಿ ಶೇ.1.3 ಇದೆ. ಪಾಸಿಟಿವಿಟಿ ದರವು ಕೆಲ ಜಿಲ್ಲೆಗಳಲ್ಲಿ ಶೇ.19, ಮತ್ತೆ ಕೆಲ ಜಿಲ್ಲೆಗಳಲ್ಲಿ ಶೇ.14 ರಷ್ಟಿತ್ತು. ಈಗ ಪಾಸಿಟಿವಿಟಿ ದರ ಶೇ.2.2 ಗೆ ಇಳಿಕೆಯಾಗಿದೆ” ಎಂದು ತಿಳಿಸಿದರು.
“ಆರೋಗ್ಯ ಕ್ಷೇತ್ರ, ಸಂಶೋಧನೆಯಲ್ಲಿ ಜೆಎಸ್‍ಎಸ್ ವಿಶ್ವವಿದ್ಯಾಲಯ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಜೆಎಸ್‍ಎಸ್ ಸಂಸ್ಥೆಯು ನಳಂದ, ತಕ್ಷಶಿಲಾ ಮಾದರಿಯಲ್ಲಿ ಬೆಳೆಯಲಿದೆ. ಕೋವಿಡ್ ವಿರುದ್ಧ ಇನ್ನೂ ಹೋರಾಟ ನಡೆಯುತ್ತಿದ್ದು, 1,800 ಹಾಸಿಗೆಯ ಆಸ್ಪತ್ರೆ, ನುರಿತ ಸಿಬ್ಬಂದಿಯನ್ನು ನೀಡುವ ಮೂಲಕ ಜೆಎಸ್‍ಎಸ್ ಈ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದೆ ಎಂದು ಸಚಿವರು ಶ್ಲಾಘಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.
ಸಚಿವರು ಹೇಳಿದ ಇತರೆ ಅಂಶಗಳು : *ಗುಣಮಟ್ಟ ಹಾಗೂ ಕಡಿಮೆ ದರದ ಚಿಕಿತ್ಸೆ ನೀಡುವ ಗುರಿ ನಮ್ಮ ಸರ್ಕಾರಕ್ಕಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ರಾಜ್ಯದ 1.5 ಕೋಟಿ ಕುಟುಂಬಗಳಿಗೆ ಪ್ರಯೋಜನ ದೊರೆಯುತ್ತಿದೆ. *ದೇಶದಲ್ಲಿ ಶೇ.60 ರಷ್ಟು ಜನರು ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ. ನಮ್ಮಲ್ಲಿ ಅನೇಕ ಆರೋಗ್ಯ ಸೇವೆ ಉಚಿತವಾಗಿದ್ದರೂ ಗುಣಮಟ್ಟ ಹೊಂದಬೇಕಿದೆ.
*ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭವಾಗಲಿದೆ.
ಕಾಂಗ್ರೆಸ್‍ಗೆ ತಳಮಟ್ಟ ಗೊತ್ತಿಲ್ಲ: “ಕಾಂಗ್ರೆಸ್ ನವರಿಗೆ ತಳಮಟ್ಟದ ರಾಜಕಾರಣ ಅರ್ಥವಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆಯೇ ಆಗಿದೆ” ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
“ಬಿಜೆಪಿ ಪ್ರತಿ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸುತ್ತದೆ. ಆದ್ದರಿಂದ ವಿಧಾನಪರಿಷತ್ ಹಾಗೂ ವಿಧಾನಸಭೆ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇದರಿಂದ ಪಕ್ಷ ಎಷ್ಟು ಬಲಿಷ್ಠವಾಗಿದೆ ಎಂದು ಗೊತ್ತಾಗಿದೆ” ಎಂದರು.

By admin