ವೈದ್ಯಕೀಯ ಸೇವೆ ದೇವರ ಸೇವೆಗೆ ಸಮಾನ ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಮಧು ಜಿ ಮಾದೇಗೌಡ ಹೇಳಿದರು.ಅವರು ಇಂದು ಶುಕ್ರವಾರ ಸಂಜೆ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಮಯದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ ವೈದ್ಯ ಸಮುದಾಯವನ್ನು ಸ್ಮರಿಸಿ, ವೈದ್ಯರಲ್ಲಿಯೇ ದೇವರನ್ನು ಕಾಣಬೇಕೆಂದರು. ತಾವು ವಿಧಾನ ಪರಿಷತ್ ಸದಸ್ಯರಾದ ಮೇಲೆ ಪಾಲ್ಗೊಳ್ಳುತ್ತಿರುವ ಮೊಟ್ಟಮೊದಲ ಕಾರ್ಯಕ್ರಮ ಇದೆಂದರು. ಸುಯೋಗ ಆಸ್ಪತ್ರೆಯು ಸಮಾಜಕ್ಕೆ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಯೋಗ್ ಡಯಾಬಿಟಿಕ್ ಕೇಂದ್ರದ ಕಾರ್ಯದರ್ಶಿ ಕೃಷ್ಣ ಮಾತನಾಡಿ, ಡಾ. ಎಸ್ ಪಿ ಯೋಗಣ್ಣ ಅವರ ಕುಟುಂಬ ವರ್ಗದವರೆಲ್ಲರೂ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡು ತಮ್ಮನ್ನು ಈ ಕ್ಷೇತ್ರಕ್ಕೆ ಸಮರ್ಪಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಯೋಗ ಆಸ್ಪತ್ರೆ ಅಧ್ಯಕ್ಷ ರಾದ ಡಾ.ಎಸ್ ಪಿ ಯೋಗಣ್ಣ ಮಾತನಾಡಿ, ಪ್ರತಿಭಾವಂತ ಹಾಗೂ ಅಂತಕರಣವುಳ್ಳ ವೈದ್ಯರಾಗಿ, ಮೌಲ್ಯಯುತ ರಾಜಕಾರಣಿಯಾಗಿ ಸಮಾಜ ಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡು, ಸಾಯುವ ದಿನದವರೆಗೂ ಬಡವರ ಸೇವೆಯಲ್ಲೇ ದಿನ ಕಳೆದ ಮಹಾನ್ ಚೇತನ ಡಾ.ಬಿ ಸಿ ರಾಯ್ ಎಂದರಲ್ಲದೆ ಅವರ ಆದರ್ಶ ಪ್ರತಿಯೊಬ್ಬ ವೈದ್ಯರಿಗೂ ಮಾರ್ಗದರ್ಶಕ ಎಂದರು.
ಇದೇ ಸಂದರ್ಭ ಡಾ.ಬಿ ಸಿ ರಾಯ್ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ನೆರವೇರಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಡಾ.ವಾಸುದೇವ ಪೈ, ಡಾ.ದರ್ಶನ್, ಡಾ. ಗಿರೀಶ್, ಡಾ. ಶ್ರೀಧರ್ ಹಾಗೂ ಡಾ. ಪ್ರಕಾಶ್ ಬಾಬು ಅವರುಗಳಿಗೆ ರಾಮಕೃಷ್ಣನಗರದ ಹಿರಿಯ ನಾಗರಿಕ ಸಂಘದವರು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಸುಯೋಗ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಯೋಗ್ ಯೋಗಣ್ಣ, ನಿರ್ದೇಶಕರಾದ ಡಾ. ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.