ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಶರತ್ ಬಾಬು ರವರನ್ನು ನೂತನ ಸಮುದಾಯ ಆರೋಗ್ಯ ಅಧಿಕಾರಿಗಳು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಡಾಕ್ಟರ್ ಶರತ್ ಬಾಬು ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾಕ್ಟರ್ ಬಿ.ಸಿ ರಾಯ್ ನೆನಪಿಗೋಸ್ಕರ ದೇಶದಲ್ಲಿ ವೈದ್ಯರ ದಿನಾಚರಣೆ ಆಚರಿಸುತ್ತಿದ್ದೇವೆ. ಬಿ. ಸಿ ರಾಯ್ ಬಿಹಾರದ ಬಡ ಕುಟುಂಬದಲ್ಲಿ ಜನಿಸಿ ಲಂಡನ್ ಯೂನಿವರ್ಸಿಟಿಯಲ್ಲಿ ಏಕಕಾಲದಲ್ಲಿ 2 ಪದವಿಗಳನ್ನು ಪಡೆಯುತ್ತಾರೆ .
ಕಲ್ಕತ್ತ ಯೂನಿವರ್ಸಿಟಿಯಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ, 14 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಶಾಸಕರಾಗಿ , ಮುಖ್ಯಮಂತ್ರಿಯಾಗಿ ಜನಪರ ಅಭಿವೃದ್ಧಿ ಕೆಲಸ ಮಾಡಿದರು. ಕೊಳಚೆ ಪ್ರದೇಶಗಳಲ್ಲಿ ಕ್ಲಿನಿಕ್ ತೆರೆದು ಬಡ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಇವರ ಸೇವೆ ಪರಿಗಣಿಸಿ ಸರ್ಕಾರವು ಭಾರತರತ್ನ ಪ್ರಶಸ್ತಿ ನೀಡಿ ಅವರ ನೆನಪಿಗೋಸ್ಕರ ದೇಶದಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ. ಇಂದಿನ ಯುವ ವೈದ್ಯರು ಡಾಕ್ಟರ್ ಬಿ. ಸಿ. ರಾಯ್ ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಗಿಡ್ಡೇಗೌಡ, ಮಹೀಂದ್ರ, ಸುನಿಲ್, ಸುಮನ್, ಸುರೇಶ್, ನಾಗೇಶ್, ಸುಬ್ರಮಣಿ, ಪುನೀತ್, ಸಂತೋಷ್ ವಿಶ್ವ ಹಾಗೂ ಆರೋಗ್ಯ ನಿರೀಕ್ಷಕರಾದ ಪ್ರಕಾಶ್, ಲತಾ ಹಾಗು ಅಣ್ಣೇಗೌಡ ಹಾಜರಿದ್ದರು.