ನಾವೆಲ್ಲರೂ ಬದುಕುವುದಕ್ಕಾಗಿ ಒಂದಲ್ಲ ಒಂದು ರೀತಿಯ ಉದ್ಯೋಗವನ್ನು ಮಾಡುತ್ತಿದ್ದೇವೆ. ಆದರೆ ಈ ಉದ್ಯೋಗದಲ್ಲಿ ಎಲ್ಲರೂ ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಕೆಲವರಷ್ಟೆ ಸಾಧನೆಯ ಪತಾಕೆಯನ್ನು ಹಾರಿಸಿರುತ್ತಾರೆ. ಇಬ್ಬರು ಒಂದೇ ಉದ್ಯೋಗವನ್ನು ಮಾಡಿದರೂ ಕೆಲವೊಮ್ಮೆ ಒಬ್ಬನೇ ಒಬ್ಬ ಮಾತ್ರ ಅದರಲ್ಲಿ ಯಶಸ್ಸು ಸಾಧಿಸಿರುತ್ತಾನೆ. ಮತ್ತೊಬ್ಬನಿಗೆ ಯಶಸ್ಸು ಮರೀಚಿಕೆಯಾಗಿರುತ್ತದೆ. ಇದ್ಯಾಕೆ ಹೀಗೆ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ…
ನಿರಾಸೆಯೇ ಸಾಧನೆಯ ಮೊದಲ ಶತ್ರು
ಬಹಳಷ್ಟು ಸಾಧಕರು ಸಾಧನೆಗಾಗಿ ಕೆಲಸ ಮಾಡಿರುವುದಿಲ್ಲ. ಅವರ ಪಾಡಿಗೆ ಅವರು ಮಾಡಿರುತ್ತಾರೆ. ಅದು ಬೇರೆಯವರಿಗೆ ಸಾಧನೆಯಾಗಿ ಕಾಣುತ್ತದೆ. ಆದರೆ ಕೆಲವರು ಏನಾದರೊಂದು ಸಾಧನೆ ಮಾಡಬೇಕೆಂದು ಹೊರಡುತ್ತಾರೆ. ಅದು ಸಾಧ್ಯವಾಗದೆ ಕೈಚೆಲ್ಲಿ ಕೂರುತ್ತಾರೆ. ಇಷ್ಟಕ್ಕೂ ನಾವು ಏನೇ ಕೆಲಸ ಮಾಡಿದರೂ ಅದರಲ್ಲಿ ಸಹಜವಾಗಿಯೇ ಪ್ರತಿಫಲಾಪೇಕ್ಷೆ ಬಯಸುತ್ತೇವೆ. ನಮ್ಮ ನಿರೀಕ್ಷೆಯಂತೆ ಪ್ರತಿಫಲಗಳು ದೊರೆಯದೆ ಹೋದಾಗ ಅದರತ್ತ ನಿರಾಸೆ ಮೂಡುತ್ತದೆ. ಆದರೆ ನೆನಪಿರಲಿ ಇಂತಹ ನಿರಾಸೆಗಳೇ ನಮ್ಮ ಸಾಧನೆಯ ಮೊದಲ ಶತ್ರು.
ನಾವು ಮಾಡುವ ಕೆಲಸದಲ್ಲಿ ಸೋಲು ಕಾಣಲು ಕಾರಣಗಳು ಹಲವು ಇರಬಹುದು. ನಾವು ಏನನ್ನು ಮಾಡುತ್ತೇವೆಯೋ ಅದನ್ನು “ಕರ್ತವ್ಯ” ಎಂಬಂತೆ ಭಾವಿಸಿ ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ಎಡವಿ ಬಿದ್ದಿರುತ್ತೇವೆ. ಇದು ಕೆಲವೊಮ್ಮೆ ಒಳ್ಳೆಯ ಪ್ರತಿಫಲಕ್ಕೆ ಅಡ್ಡಗಾಲಾಗಿ ಬಿಡುತ್ತದೆ. ನಮ್ಮ ಓದಿಗೆ ತಕ್ಕಂತೆ ಒಂದು ಕೆಲಸ ಪಡೆದಿರುತ್ತೇವೆ. ಆ ನಂತರ ನಮ್ಮ ಪಾಲಿನ ಕೆಲಸ ಏನಿದೆಯೋ ಅದನ್ನು ನಿತ್ಯವೂ ಮಾಡಿಕೊಂಡು ಹೋಗುತ್ತಿರುತ್ತೇವೆ. ಅದಕ್ಕೊಂದಿಷ್ಟು ವೇತನವೂ ಬರುತ್ತದೆ. ಆ ಕೆಲಸಕ್ಕೆ ನಾವು ಹೊಂದಿಕೊಂಡು ಬಿಡುತ್ತೇವೆ.
ಪೈಪೋಟಿ ಎದುರಿಸುವುದು ಅನಿವಾರ್ಯ
ಇವತ್ತಿನ ಮಟ್ಟಿಗೆ ನಾವು ಮಾಡುವ ಯಾವುದೇ ಕೆಲಸವಿರಲಿ ಅದರಲ್ಲಿ ನಮ್ಮನ್ನು ನಾವು ಆಳವಾಗಿ ತೊಡಗಿಸಿಕೊಳ್ಳದೆ ಹೋದರೆ ಯಶಸ್ಸು ಸಾಧಿಸುವುದಿರಲಿ, ಕೆಲಸವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿ ಬಿಡುತ್ತದೆ. ಈಗ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿಯಿದೆ. ಹೀಗಾಗಿ ಆ ಪೈಪೋಟಿಯನ್ನು ಎದುರಿಸದೆ ಹೋದರೆ ಬದುಕುವುದೇ ಕಷ್ಟವಾಗಲಿದೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕಾದರೆ ಮಾಡುವ ಯಾವುದೇ ಕೆಲಸವಾಗಿರಲಿ ಅದನ್ನು ಕರ್ತವ್ಯ ಎಂಬಂತೆ ತಿಳಿದುಕೊಂಡು ಅದಕ್ಕೆ ನ್ಯಾಯ ಸಲ್ಲಿಸಬೇಕಾಗುತ್ತದೆ.
ಇವತ್ತಿನ ಲೌಕಿಕ ಬದುಕಿಗೆ ಅವತ್ತಿನ ಅಧ್ಯಾತ್ಮಿಕ ಚಿಂತಕರು ನೀಡಿರುವ ಉಪದೇಶಗಳು ತುಂಬಾ ಚೆನ್ನಾಗಿ ಹೊಂದುತ್ತವೆ. ಸ್ವಾಮಿ ವಿವೇಕಾನಂದರು ಕರ್ಮಯೋಗದಲ್ಲಿ ನಾವು ಮಾಡುವ ಕೆಲಸವನ್ನು ಕರ್ತವ್ಯ ಎಂಬಂತೆ ಏಕೆ ಮಾಡ ಬೇಕು ಎಂಬುದರ ಬಗ್ಗೆ ಸವಿವರವಾಗಿ ಹೇಳಿದ್ದಾರೆ. ಅವರೇ ಹೇಳಿದಂತೆ ಕರ್ತವ್ಯ ಎಂಬುವುದು ವಸ್ತುನಿಷ್ಠವಾದದ್ದು, ಅದರ ಲಕ್ಷಣ ಹೇಳುವುದು ಅಸಾಧ್ಯ. ಏಕೆಂದರೆ ವ್ಯಕ್ತಿ ನಿಷ್ಠ ದೃಷ್ಟಿಯಿಂದ ನೋಡಿದ್ದೇ ಆದರೆ ಕರ್ತವ್ಯ ಎಂಬುವುದಿದೆ. ದೈವೋನ್ಮುಖವಾಗಿ ನಮ್ಮನ್ನು ಮುಂದುವರೆಸುವ ಯಾವುದೇ ಕಾರ್ಯಗಳಾಗಿರಲಿ ಅದು ಸತ್ಕರ್ಮ ಸತ್‌ಕ್ರಿಯೆ. ಅದನ್ನು ಮಾಡುವುದು ನಮ್ಮ ಕರ್ತವ್ಯವಾಗುತ್ತದೆ.
ತನ್ನದೇ ಆದ ಸ್ಥಾನಮಾನ ಸಂಪಾದಿಸಬೇಕು
ಸಮಾಜಕ್ಕೆ ಹೊಂದಿಕೊಂಡು ಹೋಗಬೇಕು. ಯಾವುದೇ ಕಾಲದಲ್ಲಾಗಲೀ ಮಾಡುವ ಯಾವುದೇ ಕೆಲಸವಿರಲಿ ಅದನ್ನು ನಮ್ಮ ಕರ್ತವ್ಯವೆಂದು ಅರಿತು ಮಾಡುವುದರ ಮೂಲಕ ಮುನ್ನಡೆಯಬೇಕು. ಮೊದಲು ಜನ್ಮಸಿದ್ಧವಾದ ಕರ್ತವ್ಯವನ್ನು ಮಾಡಬೇಕು. ಅದು ನೆರವೇರಿದ ನಂತರ ಸಮಾಜದಲ್ಲಿ ನಮ್ಮ ಸ್ಥಾನಕ್ಕೆ ತಕ್ಕುದಾದ ಕರ್ತವ್ಯವನ್ನು ಮಾಡಬೇಕು. ಏಕೆಂದರೆ ಪ್ರತಿಯೊಬ್ಬನಿಗೂ ಒಂದೊಂದು ಸ್ಥಾನ ಕಲ್ಪಿತವಾಗಿರುವುದರಿಂದ ಆ ಸ್ಥಾನಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೆರವೇರಿಸಲೇ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೆಲವೊಂದು ಸಲ ನಾವು ಮಾಡಿದ್ದೇ ಸರಿ ಎಂಬ ಮನೋಭಾವ, ನನ್ನಿಂದಲೇ ಎಲ್ಲ ನಡೆಯುತ್ತಿದೆ ಎಂಬ ಅಹಂ ನಮ್ಮ ಕೆಲಸಕ್ಕೆ ಸಂಚಕಾರವನ್ನು ತಂದೊಡ್ಡುತ್ತದೆ. ನನಗೆ ಕೆಲಸದಲ್ಲಿ ಅನುಭವವಿದೆ ಎಂದು ತಿಳಿದುಕೊಳ್ಳಬೇಕೇ ಹೊರತು ಎಲ್ಲವೂ ಗೊತ್ತಿದೆ ಎಂಬ ಅಹಂಕಾರ ನಮ್ಮ ಹಾದಿಗೆ ಮುಳ್ಳಾದರೂ ಅಚ್ಚರಿಪಡಬೇಕಾಗಿಲ್ಲ. ಇನ್ನು ಮುಖ್ಯವಾಗಿ ಅರಿತುಕೊಳ್ಳಬೇಕಾದ ವಿಚಾರ ಏನೆಂದರೆ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವುದನ್ನು ಕಲಿಯಬೇಕು.
ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವುದು ಅಗತ್ಯ
ಏಕೆಂದರೆ ಇಂತಹ ಪರೀಕ್ಷೆಗಳು ನಾವಿಡುವ ತಪ್ಪು ಹೆಜ್ಜೆಯನ್ನು ಗುರುತಿಸಿ ಸರಿಪಡಿಸಲು ಮತ್ತು ಕರ್ತವ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದೇನೆಯೇ ಎಂಬುವುದನ್ನು ಅರಿತುಕೊಳ್ಳಲು ಅಷ್ಟೇ ಅಲ್ಲದೆ ತಕ್ಷಣದ ಸಾಧಕ-ಬಾಧಕಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಬಹುಮುಖ್ಯವಾಗಿ ನಾವೆಲ್ಲರೂ ನೆನಪಿಡಬೇಕಾಗಿದ್ದು ಏನೆಂದರೆ, ಕೆಳಮಟ್ಟದ ಕೆಲಸ ಮಾಡುವುದರಿಂದ ವ್ಯಕ್ತಿ ಕೀಳಾಗುವುದಿಲ್ಲ. ವ್ಯಕ್ತಿಯು ಮಾಡುವ ಕರ್ತವ್ಯದ ಸ್ವಭಾವದ ದೃಷ್ಟಿಯಿಂದ ಅವನ ಯೋಗ್ಯತೆಯನ್ನು ನಿರ್ಣಯಿಸದೆ ಅದನ್ನು ಆತನು ಮಾಡುವ ರೀತಿಯಿಂದಲೂ, ಯಾವ ಮನೋಭಾವದಿಂದ ಮಾಡುತ್ತಾನೆ ಎಂಬುವುದರಿಂದಲೂ ನಿರ್ಣಯಿಸಬೇಕು.
ಕರ್ತವ್ಯ ಜ್ಞಾನದ ಮೂಲಕ ಮಾಡಿದ ಕಾರ್ಯ ಉಪಾಸನೆಯಂತೆ, ಪೂಜೆಯಂತೆ, ಕರ್ತವ್ಯ ತತ್ವವು ಅದು ನೈತಿಕ ರೂಪದಲ್ಲಿರಲಿ ಅಥವಾ ಪ್ರೀತಿಯ ರೂಪದಲ್ಲಿರಲಿ ಎಲ್ಲ ಯೋಗಗಳಿಗೆ ಸಮಾನಾಗಿರುತ್ತದೆ ಎಂಬುದಾಗಿ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಕೆಲಸ ಯಾವುದೇ ಇರಲಿ ಅದನ್ನು ಪ್ರೀತಿಸಿ
ನಮ್ಮ ಸುತ್ತಮುತ್ತ ಇರುವವರು ಹೊಟ್ಟೆಪಾಡಿಗಾಗಿ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾರೆ. ಕೆಲವರು ಯಾವುದೇ ಒಂದು ಕೆಲಸಕ್ಕೆ ಹೊಂದಿಕೊಳ್ಳದೆ ಬದಲಾಯಿಸುತ್ತಲೇ ಇರುತ್ತಾರೆ. ಇನ್ನು ಕೆಲವರು ತಾವು ತೊಡಗಿಸಿಕೊಂಡ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲಾಗದೆ ಒದ್ದಾಡುತ್ತಿರುತ್ತಾರೆ. ಇಂತಹವರು ಗಮನಿಸಬೇಕಾಗಿರುವುದು ಏನೆಂದರೆ ಏನೂ ಮಾಡುತ್ತಿದ್ದೇವೆಯೋ ಅದನ್ನು ಕಷ್ಟಪಟ್ಟು ಮಾಡದೆ ಇಷ್ಟಪಟ್ಟು ಮಾಡಬೇಕು. ಅದು ಯಾವುದೇ ಕೆಲಸವಾಗಿರಲಿ ಅದರತ್ತ ಅಸಡ್ಡೆ ಮಾಡದೆ ಕರ್ತವ್ಯ ಎಂಬಂತೆ ಇನ್ನಷ್ಟು ಚೆಂದವಾಗಿ ಮಾಡುವ, ಎಲ್ಲಿ ತಪ್ಪಾಗಿದೆಯೋ ಅದನ್ನು ಸರಿಪಡಿಸಿಕೊಂಡು ಮುಂದುವರೆಯುವ ಬಗ್ಗೆ ಚಿಂತನೆ ಮಾಡಬೇಕು.
ಆದರೆ ನೆನಪಿರಲಿ, ಕೆಲಸದಲ್ಲಿನ ಪೈಪೋಟಿ ಆರೋಗ್ಯಕರವಾಗಿರಲಿ. ಅನಾರೋಗ್ಯಕರ ಪೈಪೋಟಿ ಕೆಲವೊಮ್ಮೆ ತಕ್ಷಣಕ್ಕೆ ಯಶಸ್ಸನ್ನು ತಂದು ಕೊಟ್ಟಂತೆ ಭಾಸವಾದರೂ ಕ್ರಮೇಣ ಅದಕ್ಕೆ ಕಂದಾಯ ಕಟ್ಟಬೇಕಾಗುತ್ತದೆ. ಆದುದರಿಂದ ನಾವೇನು ಕೆಲಸ ಮಾಡುತ್ತಿದ್ದೇವೆಯೋ ಅದನ್ನು ಒಂದೊಳ್ಳೆಯ ಮನಸ್ಸಿನಿಂದ ಮಾಡೋಣ.. ಫಲಾಪಲಗಳನ್ನು ಭಗವಂತನಿಗೆ ಬಿಟ್ಟು ಬಿಡೋಣ…
-ಬಿ.ಎಂ.ಲವಕುಮಾರ್