ಚಾಮರಾಜನಗರ: ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇನ್ನು ಮುಂದೆ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು. ಬಡವರ ಜನಸಾಮಾನ್ಯರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದು ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ತಹಶೀಲ್ದಾರರು, ತಾಲೂಕು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಪಂಚಾಯಿತಿಗಳಲ್ಲಿ ಬಡವರ ಪರ ಕೆಲಸ ಮಾಡಿಕೊಡಿ. ಅನಾವಶ್ಯಕವಾಗಿ ತೊಂದರೆ ಕೊಡಬೇಡಿ. ನಿಮ್ಮ ಧೋರಣೆ ಇನ್ನಾದರೂ ಬದಲಾಗಬೇಕು. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಯಾರನ್ನೂ ಅಲೆದಾಡಿಸಬೇಡಿ. ನಿಮ್ಮ ಜವಾಬ್ದಾರಿ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿ ಎಂದು ಉಸ್ತುವಾರಿ ಸಚಿವರು ಸೂಚಿಸಿದರು.
ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸಿಕೊಡುವ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು. ವಸತಿ ಸೌಲಭ್ಯ ಅರ್ಹರೆಲ್ಲರಿಗೂ ಸಿಗಲಿದೆ. ಈ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡಿ. ಸೂರು ಕಲ್ಪಿಸುವ ಕಾರ್ಯವನ್ನು ಬಾಕಿ ಇಡಬೇಡಿ. ಕೂಡಲೇ ಪಟ್ಟಿ ಕಳುಹಿಸಿ ಅನುಮೋದನೆ ಪಡೆದು ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಎಂದರು.
ಗ್ರಾಮಗಳಲ್ಲಿ ಸ್ವಚ್ಚತಾ ಕೆಲಸಗಳಿಗೆ ವಿಶೇಷ ಗಮನ ನೀಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲಾ ಕಡೆ ಉತ್ತಮ ಕಾಮಗಾರಿಗಳನ್ನು ನಿರ್ವಹಣೆ ಮಾಡಬೇಕು. ಗಮನಾರ್ಹ ಸಾಧನೆಯಾಗಬೇಕು. ಇ-ಸ್ವತ್ತು ಸೌಲಭ್ಯ ಸೇರಿದಂತೆ ಯಾವುದೇ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಜಿಲ್ಲೆಯ ಹಲವು ಭಾಗದಲ್ಲಿ ಇ-ಸ್ವತ್ತಿನ ಸಂಬಂಧ ಇರುವ ತೊಡಕುಗಳನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು, ತಹಶೀಲ್ದಾರರು ಪರಿಹರಿಸಬೇಕು. ಇ-ಸ್ವತ್ತು ಅರ್ಜಿಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಇನ್ನೂ ೧೫ ದಿನಗಳೊಳಗೆ ಈ ನಿಟ್ಟಿನಲ್ಲಿ ಎಲ್ಲರೂ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದ ಸಚಿವರು ಹನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೇಂದ್ರಸ್ಥಾನದಲ್ಲಿ ವಾಸಿಸದೇ ಹಾಗೂ ಸಭೆಯಲ್ಲಿ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಜುಲೈ ೧೯ ರಿಂದ ೨೨ ರವರೆಗೆ ತಾಲೂಕು ಕೇಂದ್ರಗಳಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ವಿತರಿಸುವ ತಪಾಸಣಾ ಶಿಬಿರ ಏರ್ಪಡಿಸಿದ್ದು ಈ ನಿಟ್ಟಿನಲ್ಲಿ ಹೆಚ್ಚು ಜನರಿಗೆ ಜಾಗೃತಿ ಮೂಡಿಸಿ ಸೌಲಭ್ಯ ತಲುಪಿಸಲು ವ್ಯವಸ್ಥಿತವಾದ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲಾ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕೆಲವು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ದೂರವಾಣಿ ಕರೆ ಸ್ವೀಕರಿಸಿದರೆ ಕೆಲಸವಾಗುತ್ತದೆ. ಈ ನಿರ್ಲಕ್ಷ್ಯ ಸರಿಯಲ್ಲ. ಸಮರ್ಪಕವಾಗಿ ಯಾವುದೇ ದೂರುಗಳಿಲ್ಲದೇ ಕಾರ್ಯನಿರ್ವಹಿಸಬೇಕು ಎಂದರು.
ಶಾಸಕರಾದ ಎನ್ ಮಹೇಶ್ ಅವರು ಮಾತನಾಡಿ ಸ್ವಚ್ಚತೆ ಕೆಲಸಗಳು ಸರಿಯಾಗಿ ಆಗಬೇಕು. ಇ-ಸ್ವತ್ತು ಸರಿಯಾದ ಸಮಯಕ್ಕೆ ಮಾಡಿಕೊಡಬೇಕು. ವಸತಿ ಯೋಜನೆಯಡಿ ಇನ್ನೂ ಆರಂಭವಾಗದೇ ಇರುವ ಮನೆ ಕಾಮಗಾರಿ ತ್ವರಿತವಾಗಿ ಆಗಬೇಕು ಎಂದು ತಿಳಿಸಿದರು.
ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ ನರೇಗಾ ಯೋಜನೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಂದೇ ತೆರನಾದ ಪ್ರಗತಿಯಾಗುತ್ತಿಲ್ಲ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಚುರುಕಿನಿಂದ ಕೆಲಸವಾಗುತ್ತಿದೆ. ಚರಂಡಿ ಇನ್ನಿತರ ಅನೇಕ ಮೂಲಸೌಕರ್ಯ ಕೆಲಸಗಳನ್ನು ನರೇಗಾ ಅಡಿ ನಿರ್ವಹಿಸಲು ಸಾಧ್ಯವಿದೆ. ಈ ಕೆಲಸ ಕೂಡಲೇ ಆಗಬೇಕು ಎಂದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.