ನವದೆಹಲಿ: ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ಮಾಡಬೇಕಿರುವ ಕಾರಣ ವರಿಷ್ಠರ ಜತೆ ಚರ್ಚಿಸಲು ಬಂದಿದ್ದೇನೆಯೇ ಹೊರತು ಯಾವುದೇ ರೀತಿಯ ಗುಂಪುಗಾರಿಕೆ ಮಾಡಲು ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಭೇಟಿಗೆ ಯಾವುದೇ ರೀತಿಯ ಅರ್ಥ ಕಲ್ಪಿಸಬೇಕಾಗಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ. ಜತಗೆ ನಮ್ಮಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮಲ್ಲಿರುವುದು ಒಂದೇ ಗುಂಪಾಗಿದ್ದು, ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಯಾರೂ ಹೇಳಬಾರದು. ಸದ್ಯ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬೇಕು. ಕೊರೊನಾ ಸಮಯದಲ್ಲಿ ಜನರನ್ನು ಉಳಿಸುವುದು ಮತ್ತು ಆರ್ಥಿಕ ಸಂಕಟಕ್ಕೆ ಪರಿಹಾರ ಕೊಡಲು ಶ್ರಮಿಸುವುದಷ್ಟೆ ನಮ್ಮ ಉದ್ದೇಶವಾಗಿದೆ. ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಬಂದಿದ್ದೇನೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಕೊರೊನಾ ಸಮಯದಲ್ಲಿ ದೂರದಿಂದಲೇ ಮಾತಕತೆ ಮಾಡಬೇಕಿದ್ದು, ಹೀಗಾಗಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಲಾಗುವುದು. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೇಳಿದ್ದು, ಅವರು ಬಿಡುವಿದ್ದರೆ ಭೇಟಿ ಮಾಡುವುದಾಗಿ ಹೇಳಿದರು.
ಕೆಲವು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಸಮಿತಿ ಗಾತ್ರ ಹೆಚ್ಚಿಸಬೇಕೆ, ಇಳಿಸಬೇಕೆ ಎಂದು ಎರಡು ಮೂರು ವರ್ಷಗಳಿಂದ ಚರ್ಚೆ ನಡೆದಿದೆ. ಈ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡಲು ಬಂದಿದ್ದು, ಸುರ್ಜೆವಾಲ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರಲ್ಲದೆ, ಪಕ್ಷದಲ್ಲಿ ಕೆಲವು ಬದಲಾವಣೆ ಆಗಬೇಕಿದೆ. ಎಲ್ಲೆಲ್ಲಿ ಐದಾರು ವರ್ಷಗಳಿಂದ ಅಧ್ಯಕ್ಷರಿದ್ದಾರೋ ಅಲ್ಲಿ ಬದಲಾವಣೆ ಮಾಡಬೇಕು. ಬ್ಲಾಕ್ ಅಥವಾ ಜಿಲ್ಲಾಧ್ಯಕ್ಷರು ಸತತ ಎರಡು ಬಾರಿ ಅಧ್ಯಕ್ಷರಾಗಿದ್ದರೆ ಬದಲಾವಣೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.
ಮಧ್ಯಂತರ ಚುನಾವಣೆ ವಿಚಾರ ಬಿಜೆಪಿಗೆ ಬಿಟ್ಟ ವಿಚಾರ. ಒಂದು ವಿಚಾರ ಏನೆಂದರೆ ಬಿಜೆಪಿಯಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಎನ್ನುವುದು ರುಜುವಾತಾಗಿದೆ. ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಬೆಳಕಿಗೆ ತಂದಿದ್ದೆವು. ಈಗ ಬಿಜೆಪಿ ಶಾಸಕರೇ ನಮಗಿಂತ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ಮಾತಿಗೆ ಪುಷ್ಠಿ ನೀಡುತ್ತಿದ್ದಾರೆ. ಸದ್ಯಕ್ಕೆ ನಾವು ಜಿಲ್ಲಾ ಪಂಚಾಯಿತಿ, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನ ಹರಿಸುತ್ತಿರುವುದಾಗಿ ಹೇಳಿದರಲ್ಲದೆ, ಮೈಸೂರು ಮೇಯರ್ ವಿಚಾರದ ಜವಾಬ್ದಾರಿಯನ್ನು ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಹಾಗೂ ಸ್ಫಳೀಯ ಅಧ್ಯಕ್ಷರಿಗೆ ನೀಡಿದ್ದೇನೆ. ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲು ಹೇಳಿದ್ದೇನೆ ಎಂದರು.
ಬಿಜೆಪಿಯಲ್ಲಿ ರಾಜೀನಾಮೆ ನೀಡುವ ಬ್ಲಾಕ್ ಮೇಲ್ ಗಳು ನಡೆಯುತ್ತಲೇ ಇವೆ. ನಾನ್ಯಾಕೆ ಅವರ ವಿಚಾರ ಮಾತನಾಡಲಿ. ಅವರು ಪಕ್ಷಕ್ಕೆ ಬರುವ ಅರ್ಜಿ ಬಂದಾಗ ಆ ಬಗ್ಗೆ ಮಾತನಾಡೋಣ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ.
ಬಿಜೆಪಿ ಶಾಸಕರೇ ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಚರ್ಚೆ ಮಾಡಲು ವರ್ಚುವಲ್ ಸಭೆ ಕರೆಯಿರಿ ಅಂತಾ ಅಗ್ರಹಿಸಿದ್ದೇವೆ. ಈ ವಿಚಾರವಾಗಿ ತನಿಖೆ ಮಾಡಲು ಜಂಟಿ ಸದನ ಸಮಿತಿ ರಚಿಸಲು ಒತ್ತಾಯಿಸಿದ್ದೇವೆ. ನೀರಾವರಿ ಖಾತೆ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಈ ಆರೋಪಗಳಿಗೆ ಉತ್ತರ ನೀಡದೇ, ಇವುಗಳನ್ನು ನಿಜ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

By admin