ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ರವರ ಬ್ರಹ್ಮರಥೋತ್ಸವ, ಜಾತ್ರಾ ಮಹೋತ್ಸವ ಕಾರ್ಯಕ್ರಮವು ಅದ್ಧೂರಿಯಿಂದ ನಡೆಯಲು ಅಗತ್ಯವಿರುವ ಸಕಲ ಸಿದ್ದತೆ ಕೈಗೊಳ್ಳುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.

ಬೆಂಗಳೂರಿನ ವಿಧಾನಸೌಧದ ಕೊಠಡಿ ಸಮಿತಿ ಸಭಾಂಗಣದಲ್ಲಿ ಇಂದು ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಜಾತ್ರಾ ಕಾರ್ಯಕ್ರಮಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಿಳಿಗಿರಿ ರಂಗನಾಥಸ್ವಾಮಿ ರವರ ರಥವು ಸುಮಾರು ೧೦೦ ವರ್ಷಗಳಿಗಿಂತ ಹಳೆಯದಾಗಿದ್ದರಿಂದ ೨೦೧೬ ರಲ್ಲಿ ರಥವು ತುಂಬಾ ಶಿಥಿಲವಾದ ಕಾರಣ, ಕಳೆದ ೬ ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ನೂತನ ರಥವನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಏಪ್ರಿಲ್ ೧೬ ರಂದು ಬ್ರಹ್ಮರಥೋತ್ಸವವನ್ನು ಎಲ್ಲಾ ಭಕ್ತಾಧಿಗಳು ಪಾಲ್ಗೋಳಲು ಅವಕಾಶವಾಗುಂತೆ ಬ್ರಹ್ಮ ರಥೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.

ಬಿಳಿಗಿರಿರಂಗನಾಥ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕು. ರಸ್ತೆಗಳನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ರಥ ಚಲಿಸುವ ರಥದ ಬೀದಿಯಲ್ಲೂ ರಥದ ಚಲನೆ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ರಥೋತ್ಸವಕ್ಕೂ ಮೊದಲು ಕೈಗೊಳ್ಳಬೇಕಿರುವ ರಥದ ಮೊದಲ ಚಲನೆ ಪ್ರಕ್ರಿಯೆಗೆ ಸಾಂಪ್ರಾದಾಯದಂತೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ನಿಗದಿ ಮಾಡಬೇಕು. ದೇವರ ದರ್ಶನ, ಬ್ರಹ್ಮ ರಥೋತ್ಸವ, ಜಾತ್ರಾ ಮಹೋತ್ಸವಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಕೊರತೆ ಆಗಬಾರದು. ಈ ಸೌಲಭ್ಯಗಳಿಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಸಹ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಉಸ್ತುವಾರಿ ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎನ್. ಮಹೇಶ್ ಅವರು ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ರಾಜ್ಯ ಪುರಾತತ್ವ ಇಲಾಖೆ ದೇವಾಲಯದ ಆವರಣದಲ್ಲಿ ಕೈಗೊಂಡಿರುವ ನೆಲಹಾಸು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ರಥೋತ್ಸವಕ್ಕೂ ಮೊದಲು ಸಂಪ್ರಾದಾಯದಂತೆ ನಡೆಸಬೇಕಿರುವ ರಥದ ಮೊದಲ ಚಲನೆಯ ಮಟತೇರು ಕಾರ್ಯವನ್ನು ನೆರವೇರಿಸಲು ಸಿದ್ದತೆ ಕೈಗೊಳ್ಳಬೇಕೆಂದು ಸೂಚಿಸಿದರು.
ಶ್ರೀಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಕಾಂಪೌಂಡ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಹೊಸ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗನೇ ಆರಂಭಿಸಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಹ ವಿಳಂಭ ಮಾಡದೇ ತುರ್ತಾಗಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅರಣ್ಯ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಶೀಘ್ರ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿ ಜಾತ್ರ್ರೆಗೆ ಎಲ್ಲಾ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ಇದೇ ಮಾರ್ಚ್ ೧೮ ರಂದು ತಾವು ಶಾಸಕರಾದ ಎನ್. ಮಹೇಶ್ ಅವರೊಂದಿಗೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿ ಬ್ರಹ್ಮ ರಥೋತ್ಸವ, ಜಾತ್ರಾ ಮಹೋತ್ಸವ ಪೂರ್ವ ಸಿದ್ದತೆಗಳನ್ನು ವೀಕ್ಷಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸಿಂಧೂ ರೂಪೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಆನಂದಪ್ಪನಾಯಕ, ದೇವಾಲಯದ ಪ್ರಧಾನ ಅರ್ಚಕರಾದ ರವಿಕುಮಾರ್, ಅರ್ಚಕರಾದ ನಾಗೇಂದ್ರಭಟ್, ಆಗಮಿಕರಾದ ನಾಗರಾಜ ಭಟ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವಿನಯ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಾಂತ್ರಣಾಧಿಕಾರಿ ಶ್ರೀನಿವಾಸ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
