
ಚಾಮರಾಜನಗರ: ಜಿಲ್ಲಾಡಳಿತವೇ ಗ್ರಾಮಕ್ಕೆ ಬಂದು ಜನರ ಅಹವಾಲು ಆಲಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಮಹತ್ವ ಹಾಗೂ ಅರ್ಥಪೂರ್ಣ ಎನಿಸಿದೆ ಎಂದು ಶಾಸಕರಾದ ಎನ್. ಮಹೇಶ್ ಅವರು ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಅರಣ್ಯದಂಚಿನ ಗ್ರಾಮ ಯರಕಟ್ಟೆ ಗ್ರಾಮದ ಮಹದೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತವೇ ಬಂದು ಸಮಸ್ಯೆಗಳನ್ನು ಅರಿತು ಪರಿಹರಿಸುವಲ್ಲಿ ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರ ಬಳಿ ತೆರಳಿ ಅವರ ಸಮಸ್ಯೆಗಳ ಪರಿಹಾರಕ್ಕೆ ತೊಡಗಿದ್ದಾರೆ ಎಂದರು.
ಕಂದಾಯ ದಾಖಲೆಗಳನ್ನು ಸಾರ್ವಜನಿಕರು ಈ ಹಿಂದೆ ಕಚೇರಿಗಳಿಗೆ ಅಲೆದು ಪಡೆಯಬೇಕಿತ್ತು. ಇಂದು ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಉತ್ತಮ ಯೋಜನೆಗೂ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಪ್ರಮಾಣ ಪತ್ರಗಳು, ಕಂದಾಯ ದಾಖಲೆಗಳನ್ನು ಜನರಿಗೆ ನೇರವಾಗಿ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ತಿಳಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ೭೫ ಅರ್ಜಿಗಳು ಸ್ವೀಕೃತವಾಗಿವೆ. ಅಂಗನವಾಡಿಗೆ ಬೇಡಿಕೆಯಿದ್ದು ಗ್ರಾಮದ ಶಾಲೆಯಲ್ಲಿಯೇ ಈಗಿರುವ ಅಂಗನವಾಡಿ ಆರಂಭಿಸಲು ಅಧಿಕಾರಿಗಳು ಪರಿಶೀಲಿಸಬೇಕು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ದ ಮಹಿಳೆಯರು ಧ್ವನಿ ಎತ್ತಿದ್ದಾರೆ. ಕೂಡಲೇ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಶಾಸಕರು ತಿಳಿಸಿದರು.
ಸ್ಥಳೀಯ ಸೋಲಿಗರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಬೇಕು. ಪೌಷ್ಠಿಕಾಂಶ ಕೊರತೆಯಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಅರಣ್ಯ ಇಲಾಖೆ ಇಲ್ಲಿನ ದೇವಾಲಯ ಪ್ರವೇಶಕ್ಕೆ ಅಡ್ಡಿ ಉಂಟು ಮಾಡಬಾರದು. ಇ-ಸ್ವತ್ತು ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕರಾದ ಎನ್ ಮಹೇಶ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ಆಲಿಸಲಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುತ್ತದೆ. ಇಲ್ಲಿನ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಆಗಲಿದೆ. ಯೋಜನೆಗೆ ಟೆಂಡರ್ ಸಹ ಆಗಿದೆ ಎಂದರು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು, ಸ್ತ್ರೀಶಕ್ತಿ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುವುದು. ಜಾಬ್‌ಕಾರ್ಡ್ ನೀಡಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆದು ಜನರು ಮುಂದೆ ಬರಬೇಕೆಂದು ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ಪವರ್ ಟಿಲ್ಲರ್ ಹಾಗೂ ಶಾಲೆಗಳಿಗೆ ಟ್ಯಾಬ್ ಹಾಗೂ ಕಂಪ್ಯೂಟರ್‌ಗಳನ್ನು ಸಹ ವಿತರಿಸಲಾಯಿತು. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಯಿತು. ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಯೋಜನೆಯಡಿ ಗ್ರಾಮಸ್ಥರಿಗೆ ದಾಖೆಲಗಳು ಪ್ರಮಾಣ ಪತ್ರಗಳನಬ್ನೂ ಸಹ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಮಂಜುಳಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ, ಉಪಾಧ್ಯಕ್ಷರಾದ ಕೆಂಪರಾಜು, ಸದಸ್ಯರಾದ ಕುಮಾರ್, ರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಉಪಸ್ಥಿತರಿದ್ದರು.
