ಚಾಮರಾಜನಗರ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಜಿಲ್ಲಾಮಟ್ಟದ ಧ್ವಜಸಂಹಿತೆ ಜಾಗೃತಿ ಅಭಿಯಾನ ಕುರಿತು ತರಬೇತಿ ಕಾರ್ಯಕ್ರಮವನ್ನು ನಗರದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಭಾರತ ಸೇವಾದಳದ ಜಿಲ್ಲಾಶಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಭಾರತಕ್ಕೆ ಸ್ವಾತಂತ್ರ್ಯಗೊಂಡು ೭೫ ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಆಗಸ್ಟ್ ೧೩, ೧೪ ಮತ್ತು ೧೫ರಿಂದ ಮೂರು ದಿನಗಳ ಕಾಲ ದೇಶದ ಎಲ್ಲಾ ಮನೆಮನೆಗಳಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಇತರೆಡೆ ಧ್ವಜ ಹಾರಿಸಲು ಹರ್ ಘರ್ ತಿರಂಗಾ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಧ್ವಜ ಸಂಹಿತೆಯ ಕುರಿತು ಅರಿವು ಮೂಡಿಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ, ಕಾರ್ಯದರ್ಶಿಗಳ ಪಾತ್ರ ಪ್ರಮುಖವಾಗಿದೆ. ಧ್ವಜಾರೋಹಣ, ಅವರೋಹಣದ ಕಾರ್ಯದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಬೇಕು. ತರಬೇತಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಭಾಷಣ ಮಾಡಿದ ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿ ಶೇಷಾಚಲ ಅವರು ಮಾತನಾಡಿ ಎಲ್ಲಾ ದೇಶಗಳು ಒಂದೊಂದು ರಾಷ್ಟ್ರಧ್ವಜ ಹೊಂದಿರುವಂತೆ ಭಾರತವು ಸಹ ರಾಷ್ಟ್ರಧ್ವಜ ಹೊಂದಿದೆ. ೧೯೦೬ರಲ್ಲಿ ಮೊದಲ ರಾಷ್ಟ್ರಧ್ವಜ ರೂಪುಗೊಂಡಿತು ಅಂದಿನಿಂದ ೧೯೪೭ರವರೆಗೆ ನಾಲ್ಕಾರು ಬಗೆಯ ಧ್ವಜಗಳನ್ನು ಭಾರತ ಕಂಡಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದೇಶದ ಮಹತ್ತರ ಘಟ್ಟವಾಗಿದೆ. ರಾಷ್ಟ್ರಧ್ವಜಕ್ಕೆ ಎಲ್ಲರೂ ಗೌರವ ವಂದನೆ ಸಲ್ಲಿಸಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು. ರಾಷ್ಟ್ರಾಭಿಮಾನ, ಆತ್ಮಾಭಿಮಾನ ಎಲ್ಲರಲ್ಲೂ ಮೂಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅವಿಭಾಜ್ಯ ಅಂಗವಾಗಿರುವ ಭಾರತ ಸೇವಾದಳ ಇಂತಹ ಪರಿಣಾಮಕಾರಿ ಚಟುವಟಿಕೆಗಳಲ್ಲಿ ನಾಗರಿಕರನ್ನು ತೊಡಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಧ್ವಜ ಸಂಹಿತೆಯ ನಿರ್ವಹಣೆ ಹಲವಾರು ನಿಯಮಗಳನ್ನು ಒಳಗೊಂಡಿದೆ. ಬೆಳಿಗ್ಗೆ ೯ ಗಂಟೆಯೊಳಗೆ ಹಾಗೂ ಸಂಜೆ ೬ ಗಂಟೆವರೆಗೆ ಪ್ರಮುಖ ಸ್ಥಳಗಳಲ್ಲಿ ೩೦೬೦ ಅಳತೆಯ ಧ್ವಜವನ್ನೇ ಹಾರಿಸಬೇಕು. ೪೫೩೦ ಅಳತೆಯ ಧ್ವಜಗಳನ್ನು ಮನೆಮನೆಗಳಲ್ಲಿ ಬಳಸಬಹುದು. ಖಾಸಗಿ ಹಾಗೂ ವ್ಯಕ್ತಿಗೌರವಕ್ಕಾಗಿ ಧ್ವಜವನ್ನು ಬಳಸಬಾರದು. ಧ್ವಜ ಹಾರಿಸುವಾಗ ಉತ್ತರಾಭಿಮುಖ ಅಥವಾ ಪೂರ್ವಾಭಿಮುಖವಾಗಿ ನಿಲ್ಲಬೇಕು. ಧ್ವಜದಿಂದ ಚೆಲ್ಲುವ ಹೂಗಳನ್ನು ತುಳಿಯಬಾರದು. ಧ್ವಜಾರೋಹಣ ವಸ್ತ್ರಸಂಹಿತೆಯಿಂದ ಮುಕ್ತವಾಗಿದ್ದು, ಯಾವುದೇ ಬಗೆಯ ವಸ್ತ್ರ ಧರಿಸಿ ಧ್ವಜ ಹಾರಿಸಬಹುದು. ಧ್ವಜಾರೋಹಣ ಕಾರ್ಯದಲ್ಲಿ ಮೇಲ್ಭಾಗದಲ್ಲಿ ಕೇಸರಿ, ಕೆಳಭಾಗದಲ್ಲಿ ಹಸಿರು ವರ್ಣವಿರುವಂತೆ ಗಮನ ಹರಿಸಬೇಕು. ಹತ್ತಿಬಟ್ಟೆಯಿಂದ ತಯಾರಿಸಿದ ಧ್ವಜವನ್ನೆ ಬಳಸಬೇಕು. ಬಣ್ಣ ಕಳೆದುಕೊಂಡ ಹಾಗೂ ಕಳೆಗುಂದಿದ ಧ್ವಜ ಹಾರಿಸದೇ ಸಂಬಂಧಪಟ್ಟ ಇಲಾಖೆಗೆ ನೀಡಬೇಕು ಎಂದು ಶೇಷಾಚಲ ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸೇವಾದಳದ ತಾಲೂಕು ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ ಅವರು ಮಾತನಾಡಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರತಿಯೊಬ್ಬ ಭಾರತೀಯನ್ನು ಹೆಮ್ಮ ಪಡುವ ವಿಷಯವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ರಾಷ್ಟ್ರಾಭಿಮಾನಿಗಳು ತ್ಯಾಗ, ಬಲಿದಾನಗೈದಿದ್ದಾರೆ. ಅವರಲ್ಲರ ಸ್ಮರಣೆ ಅಗತ್ಯವಾಗಿದೆ. ಮೂರು ದಿನಗಳ ಕಾ ಆಚರಿಸಲಾಗುವ ಹರ್ ಘರ್ ತಿರಂಗಾ ಕಾರ್ಯದಲ್ಲಿ ಧ್ವಜ ಹಾರಿಸುವುದಷ್ಟೆ ಅಲ್ಲ, ಅದರ ಸಂರಕ್ಷಣೆ ಅತೀ ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ವೆಂಕಟನಾಗಪ್ಪಶೆಟ್ಟಿ ಅವರು ಮಾತನಾಡಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಹೇಗಿತ್ತು, ಸ್ವಾತಂತ್ರ್ಯನಂತರ ಸಾಧನೆಗಳೇನು, ದೇಶದ ಪ್ರಗತಿಗೆ ನಮ್ಮ ಕಾಣಿಕೆ, ಕೊಡುಗೆಗಳ ಪುನರ್ ಅವಲೋಕನವನ್ನು ಪ್ರತಿಯೊಬ್ಬರು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಭಾರತ ಸೇವಾದಳದಿಂದ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ವೇಳೆ ಭಾರತ ಸೇವಾದಳದ ತಾಲೂಕು ಅಧಿನಾಯಕರಾದ ನಾಗಣ್ಣ, ವಲಯ ಸಂಘಟಕರಾದ ಈರಯ್ಯ ಅವರುಗಳು ಧ್ವಜ ಸಂಹಿತೆಯ ಕುರಿತು ಪ್ರಾತ್ಯೇಕ್ಷಿಕೆಯನ್ನು ನಡೆಸಿಕೊಟ್ಟರು. ಭಾರತ ಸೇವಾದಳದ ತಾಲೂಕು ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ ಅವರ ಜನಪದ ಹಾಗೂ ರಾಷ್ಟ್ರಭಕ್ತಿಯ ಗೀತಗಾಯನ ಗಮನ ಸೆಳೆಯಿತು.
ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ ನಾಗರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
