
ಚಾಮರಾಜನಗರ : ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಕೊಳ್ಳೇಗಾಲದಿಂದ ಹನೂರು ವರೆಗೆ ನಡೆಯುತ್ತಿರುವ ಕೆ ಶಿಪ್ ರಸ್ತೆ ಕಾಮಗಾರಿ ಹಾಗೂ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ರಸ್ತೆ, ಭಕ್ತಾಧಿಗಳ ಸೌಕರ್ಯಕ್ಕಾಗಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಚಿಕ್ಕಿಂದುವಾಡಿಯಲ್ಲಿ ಕೆ ಶಿಪ್ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವರು ರಸ್ತೆ ಅಗಲೀಕರಣ ನಿಯಮಾನುಸಾರ ನಡೆಯಬೇಕು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಂಡು ರಸ್ತೆ ಅಭಿವೃದ್ಧಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹದೇಶ್ವರ ಬೆಟ್ಟದ ಮಾರ್ಗದ ಇತರ ಕಡೆಗಳಲ್ಲಿ ರಸ್ತೆಯಯಲ್ಲಿರುವ ಗುಂಡಿಗಳನ್ನು ಮುಚ್ಚಿಸಬೇಕು. ಜನರಿಗೆ ವಾಹನ ಸಂಚಾರಕ್ಕೆ ಅನಾನುಕೂಲ ಮಾಡಬಾರದೆಂದು ಸೂಚಿಸಿದರು. ಕಾಮಗೆರೆ ಬಳಿ ಕೊಂಗರಹಳ್ಳಿ ಬಳಿಯು ರಸ್ತೆ ಕಾಮಗಾರಿಯನ್ನು ಸಚಿವರು ವೀಕ್ಷೀಸಿದರು. ಬಳಿಕ ಹನೂರು ಪಟ್ಟಣದಲ್ಲಿಯೂ ರಸ್ತೆ ಅಗಲೀಕರಣ ಸಂಬಂಧ ಕೈಗೊಳ್ಳಲಾಗಿರುವ ಕಾಮಗಾರಿ ಪರಿಶೀಲಿಸಿದರು. ಗುಣಮಟ್ಟದ ಶಾಶ್ವತ ಕೆಲಸಗಳು ಆಗಬೇಕು. ಸೇತುವೆಗಳ ನಿರ್ಮಾಣವು ಸಹ ಕ್ರಮಬದ್ಧವಾಗಿ ನಿರ್ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ ಸಚಿವರು ಅಲ್ಲಿನ ತಂಬಡಗೇರಿ ಬೀದಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ರಸ್ತೆ ಬದಿಯಲ್ಲಿ ಅಪೂರ್ಣವಾಗಿರುವ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಸ್ಥಳೀಯ ನಿವಾಸಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಡಬೇಕು. ಬಯಲು ಮುಕ್ತ ಶೌಚಾಲಯವನ್ನಾಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗಾಗಿ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದ ಸಚಿವರು ವಾಸ್ತವ್ಯಕ್ಕಾಗಿ ಇರುವ ಡಾರ್ಮಿಟರಿಯನ್ನು ಪರಿಶೀಲಿಸಿ ಮತ್ತಷ್ಟು ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮವಾಗಿ ನಿರ್ವಹಣೆ ಮಾಡುವಂತೆ ತಿಳಿಸಿದರು.
ದಾಸೋಹ ಭವನಕ್ಕೂ ಭೇಟಿ ಕೊಟ್ಟ ಸಚಿವರು ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು. ದಾಸೋಹ ಭವನದಲ್ಲಿ ಪ್ರಸಾದ ಸೇವನೆಗೆ ಮಾಡಿರುವ ವ್ಯವಸ್ಥೆ ಹಾಗೂ ಅಡುಗೆಕೋಣೆಯನ್ನು ಪರಿಶೀಲಿಸಿದ ಸಚಿವರು ಅಲ್ಲಿಗೆ ಮತ್ತಷ್ಟು ಸೌಕರ್ಯಗಳನ್ನು ಉತ್ತಮಪಡಿಸಬೇಕೆಂದು ತಿಳಿಸಿದರು. ಅಡುಗೆಕೋಣೆ ಸೇರಿದಂತೆ ದಾಸೋಹದ ಅಚ್ಚುಕ ಟ್ಟು ನಿರ್ವಹಣೆಗೆ ಪ್ರಸ್ತಾವನೆಯೊಂದನ್ನು ಸಿದ್ದಪಡಿಸಲು ಸಚಿವರು ಸೂಚಿಸಿದರು.
ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವಿನಯ್ ಸೇರಿದಂತೆ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
