ಚಾಮರಾಜನಗರ: ತಾಲೂಕಿನ ಮೊಣಚನಹಳ್ಳಿಯಲ್ಲಿ ರೈತರು ತೆಂಗು ಬೆಳೆಗಾರರೇ ಸ್ಥಾಪಿಸಿ ನಿರ್ವಹಿಸುತ್ತಿರುವ ತೆಂಗು ಬೆಳೆ ಸಂಸ್ಕರಣ ಘಟಕಕ್ಕೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಘಟಕದ ಆವರಣದಲ್ಲಿ ಸಚಿವರು ಗಿಡ ನೆಟ್ಟು ನೀರೆರೆದರು. ಬಳಿಕ ತೆಂಗು ಬೆಳೆ ಸಂಸ್ಕರಣ ಘಟಕದಲ್ಲಿ ತೆಂಗಿನಕಾಯಿ ಪುಡಿ ತಯಾರು ಮಾಡುವ ಪ್ರತಿಯೊಂದು ಪ್ರಕ್ರಿಯೆಯನ್ನು ಸಚಿವರು ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದರು. ತೆಂಗಿನಪುಡಿ ತಯಾರಿಕೆಯಿಂದ ಹಿಡಿದು ಮಾರುಕಟ್ಟೆ ಹಂತದವರೆಗೆ ಅನುಸರಿಸಲಾಗುತ್ತಿರುವ ವಿಧಾನಗಳ ಬಗ್ಗೆ ವಿವರ ಪಡೆದುಕೊಂಡರು.
ಬಳಿಕ ಘಟಕದ ಆವರಣದಲ್ಲೇ ಇರುವ ಚಾಮರಾಜನಗರ ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರೈತ ಮುಖಂಡರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಸಂಸ್ಕರಣ ಘಟಕದ ಉತ್ಪಾದನೆ ವೆಚ್ಚ, ವಹಿವಾಟು ವಿವರಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಘಟಕಕ್ಕೆ ೩ ಕೋಟಿ ರೂ ನೆರವು ನೀಡಲಾಗಿದೆ. ಘಟಕವು ಒಳ್ಳೆಯ ಸ್ಥಳದಲ್ಲಿದ್ದು ಉತ್ತಮವಾಗಿದೆ. ಇದಕ್ಕೆ ಮೇಲ್ದರ್ಜೆಯ ಉನ್ನತ ತಂತ್ರಜ್ಞಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಗತ್ಯ ನೆರವು ಒದಗಿಸಲು ಸಮಾಲೋಚಿಸಲಾಗುವುದು. ಘಟಕವು ಇನ್ನಷ್ಟು ಉತ್ತಮ ಕ್ರಮಗಳಿಂದ ಹೆಚ್ಚು ಆರ್ಥಿಕ ವಹಿವಾಟು ನಡೆಸಬಹುದಾಗಿದೆ ಎಂದರು.
ಈ ಘಟಕಕ್ಕೆ ಹೊಸ ಚೈತನ್ಯ ತುಂಬಬೇಕಿದೆ. ನಾನು ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ವಿವರವಾಗಿ ಮಾತನಾಡುವೆ. ರೈತರಿಗೆ ಒಳ್ಳೆಯ ಯೋಜನೆ ಇದಾಗಿದ್ದು, ರೈತರು ಬೆಳೆದ ತೆಂಗಿಗೆ ಕೆಲವೊಮ್ಮೆ ದರ ಕುಸಿದಾಗ ರೈತರಿಗೆ ಈ ಘಟಕದಿಂದ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ. ರಾಮಚಂದ್ರ, ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಹೆಚ್.ಎನ್. ಸ್ವಾಮಿ, ಉಪಾಧ್ಯಕ್ಷರಾದ ಪುಟ್ಟರಸು, ನಿರ್ದೇಶಕರಾದ ಜಗದೀಶ್ ಆರಾಧ್ಯ, ಜಯಶ್ರೀ, ಹೆಚ್.ಎನ್ ವೆಂಕಟೇಶ್, ಕಾಳನಹುಂಡಿ ಗುರುಸ್ವಾಮಿ, ರೈತ ಮುಖಂಡರಾದ ಕೆ.ಪಿ. ಶಿವಸ್ವಾಮಿ, ಅಣಗಳ್ಳಿ ಬಸವರಾಜು, ಹೊನ್ನೂರು ಮಹದೇವಸ್ವಾಮಿ, ಹೆಚ್.ಎಸ್. ಬಸವರಾಜು, ಆಲೂರು ಪರಶಿವಪ್ಪ, ಇತರ ಮುಖಂಡರು, ತೆಂಗು ಬೆಳೆಗಾರರ ಸಂಸ್ಕರಣ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು ತಾಳವಾರ, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
