ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳ ಭರ್ತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಲಾಶಯದ ನೀರಿನ ಒಳಹರಿವು ಹಾಗೂ ಹೊರಹರಿವು ಸಂಬಂಧ ವಿವರ ಪಡೆದರು.
ಜಲಾಶಯಗಳಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಜಲಾವೃತವಾಗಬಹುದಾದ ಪ್ರದೇಶಗಳು ಗ್ರಾಮಗಳ ಜನರ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಕಟ್ಟೆಚ್ಚೆರದಿಂದ ಇರಬೇಕು. ಅಗತ್ಯವಿರುವ ಪರಿಹಾರ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರು ಸೂಚನೆ ನೀಡಿದರು.
ನದಿ ಜಲಾಶಯ ಪಾತ್ರದ ಗ್ರಾಮಗಳ ಜೊತೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಜನರ ಅಗತ್ಯ ನೆರವಿಗೆ ತುರ್ತಾಗಿ ಸ್ಪಂದಿಸಬೇಕು. ವಿಶೇಷವಾಗಿ ನದಿ ಜಲಾಶಯ ವ್ಯಾಪ್ತಿಗಳಲ್ಲಿ ಬರುವ ಗ್ರಾಮಗಳ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸುರಕ್ಷತೆಗೆ ವಿಶೇಷ ಗಮನ ನೀಡಬೇಕು. ಕಾಳಜಿ ಕೇಂದ್ರಗಳು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನೀರು ಹರಿಯುವ ರಸ್ತೆ, ಗ್ರಾಮ ಇನ್ನಿತರ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಜನರ ವಾಹನ ಸಂಚಾರಕ್ಕೆ ನಿಬಂಧ ವಿಧಿಸಬೇಕು. ಎಲ್ಲಿಯೂ ಯಾವುದೇ ತೊಂದರೆಗಳು ಸಂಭವಿಸದಂತೆ ಅವಶ್ಯವಿರುವ ಎಲ್ಲಾ ಕ್ರಮಗಳಿಗೆ ತ್ವರಿತವಾಗಿ ಮುಂದಾಗಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಕೆರೆಗಳು ತುಂಬಿ ಹರಿಯುವ ಸಂದರ್ಭದಲ್ಲಿ ಯಾವುದೇ ಅಪಾಯ ಉಂಟಾಗದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಮಹದೇವಸ್ವಾಮಿ, ರಫೀಕ್ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
