ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಇಂದು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿನಿಲಯದಲ್ಲಿ ಊಟ ಉಪಹಾರ ಸರಿಯಾಗಿ ನೀಡಲಾಗುತ್ತಿದೆಯೇ, ಲೇಖನ ಸಾಮಾಗ್ರಿಗಳನ್ನು ಕೊಡಲಾಗಿದೆಯೇ, ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಇದೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡರು.
ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಶೀಲರಾಗಬೇಕು. ಊರಿನಲ್ಲಿರುವ ಗ್ರಂಥಾಲಯವನ್ನು ಬಳಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು. ಶಾಲಾ ಆಟದ ಮೈದಾನದಲ್ಲಿ ಕ್ರೀಡೆಗಳನ್ನು ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ವ್ಯಾಸಂಗ ಅವಧಿಯಲ್ಲಿ ಶ್ರದ್ದೆ ಏಕಾಗ್ರತೆ ಇರಿಸಿಕೊಳ್ಳಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುರಿ ಹೊಂದಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಮಂಜುಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕರಾದ ಎಲ್. ಗಂಗಾಧರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
