ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ, ಜಾತ್ರಾ ಮಹೋತ್ಸವ ಸಂಬಂಧ ಸಿದ್ದತಾ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಕುರಿತು ಜೂಮ್ ಸಭೆಯ ಮೂಲಕ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿದರು. 
ಏಪ್ರಿಲ್ ೧೬ರಂದು ಬಿಳಿಗಿರಿರಂಗನಾಥಸ್ವಾಮಿ ರಥೋತ್ಸವ ನಡೆಯಲಿದ್ದು ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿಯೇ ಆದಷ್ಟು ಮುಂಚೆಯೇ ಎಲ್ಲಾ ಸಿದ್ದತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು. 
ಕುಡಿಯುವ ನೀರಿಗಾಗಿ ಪ್ರಸ್ತುತ ಇರುವ ಸೌಲಭ್ಯಗಳೊಂದಿಗೆ ಇನ್ನು ಎಷ್ಟು ಟ್ಯಾಂಕರ್‌ಗಳು ಅವಶ್ಯಕತೆಯಿದೆ, ಶೌಚಾಲಯಗಳ ಬಳಕೆಗೆ ಯಾವ ಕ್ರಮಗಳು ತೆಗೆದುಕೊಳ್ಳಬೇಕಿದೆ ಎಂಬ ಬಗ್ಗೆ ಪರಿಶೀಲಿಸಬೇಕು. ಪೈಪ್‌ಲೈನ್‌ಗಳು, ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆಯೇ ಎಂಬ ಬಗ್ಗೆ ನೋಡಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು. 
ಹೆಚ್ಚು ಜನ ಕ್ಷೇತ್ರಕ್ಕೆ ಆಗಮಿಸಬಹುದಾದ್ದರಿಂದ ಸ್ವಚ್ಚತೆಗೂ ವಿಶೇಷ ಗಮನಹರಿಸಬೇಕು. ಸ್ವಚ್ಚತಾ ಸಿಬ್ಬಂದಿಯನ್ನು ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸಬೇಕು. ವೈದ್ಯರ ತಂಡವು ಸಿಬ್ಬಂದಿಯೊಂದಿಗೆ ಸ್ಥಳದಲ್ಲಿಯೇ ಇದ್ದು ಚಿಕಿತ್ಸಾ ಕ್ರಮಗಳಿಗೆ ಮುಂದಾಗಬೇಕು. ಸುರಕ್ಷತೆ ದೃಷ್ಠಿಯಿಂದ ಅಗ್ನಿಶಾಮಕ ಸಿಬ್ಬಂದಿಯ ನಿಯೋಜನೆಯೂ ಆಗಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕೆಎಸ್‌ಆರ್‌ಟಿಸಿ ಬಸ್ಸುಗಳ ಸೌಕರ್ಯ, ಸುಗಮ ಸಂಚಾರ ವ್ಯವಸ್ಥೆ, ರಸ್ತೆಗಳಲ್ಲಿ ಗುಂಡಿಗಳಿದ್ದಲ್ಲಿ ಮುಚ್ಚುವ ಕಾರ್ಯ, ನಿರಂತರ ವಿದ್ಯುತ್ ಸೌಲಭ್ಯ ಸೇರಿದಂತೆ ಇತರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಥೋತ್ಸವ, ಜಾತ್ರೆಗೆ ಬೇಕಾದ ಸಿದ್ದತೆಗಳು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಸೂಚಿಸಿದರು. 
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಬಿಳಿಗಿರಿರಂಗನಬೆಟ್ಟ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಡಾ. ಸಂತೋಷ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್, ತಹಶೀಲ್ದಾರ್ ಆನಂದಪ್ಪ ನಾಯಕ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಯಳಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್, ಅರ್ಚಕರಾದ ರವಿಕುಮಾರ್, ಅಗ್ನಿಶಾಮಕ ಅಧಿಕಾರಿ ಕೆ.ಬಿ. ಹರೀಶ್ ಕುಮಾರ್, ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.