ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಮಂಗಲ ಗ್ರಾಮದಲ್ಲಿಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಗ್ರಾಮವಾಸ್ತವ್ಯ ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು.
ಮಂಗಲ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿಂದು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ 'ಜಿಲ್ಲಾಧಿಕಾರಿಗಳ ನಡೆ-ಗ್ರಾಮದ ಕಡೆಗೆ' ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಸಾರ್ವಜನಿಕರಿಂದ ನೇರವಾಗಿ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರು ಆಲಿಸಿದರು.
ಮಂಗಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಹದೇವಪ್ಪ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರಿಗೆ ಬಗರ್ ಹುಕುಂ ಸಾಗುವಳಿ ಮಾಡಿಸಿ ಸಂಬಂಧಪಟ್ಟವರಿಗೆ ಪೌತಿ ಖಾತೆ ಮಾಡಿಕೊಡಬೇಕು. ಜಮೀನುಗಳು ಮುಕ್ತವಾಗಿ ದುರಸ್ಥಿಯಾಗಬೇಕು. ಸುತ್ತಮುತ್ತಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಾಗಬೇಕು. ಆಶ್ರಯ ಯೋಜನೆಯಡಿ ನೈಜ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಅಗತ್ಯವಿರುವವರಿಂದ ದಾಖಲೆಗಳನ್ನು ಪಡೆದು ಆದ್ಯತೆ ಮೇರೆಗೆ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 
ಸ್ಥಳೀಯ ಲ್ಯಾಂಪ್ಸ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿರುವ ಕಾರೇಮಾಳದ ಪುಟ್ಟಮ್ಮ ಅವರು ಜೇನುಕುರುಬರಿಗೆ ಜೀವನೋಪಾಯಕ್ಕಾಗಿ ಅರಣ್ಯದಲ್ಲಿ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಆಡಿನ ಕಣಿವೆ, ಗುಡ್ಡಕೇರಿ, ಹಾನಂಜಿಹುಂಡಿ ಇನ್ನಿತರೆ ಗ್ರಾಮಗಳ ಅರಣ್ಯ ಹಕ್ಕುಪತ್ರ ಹಾಗೂ ಸಮುದಾಯ ಹಕ್ಕುಪತ್ರ, ಸಾಗುವಳಿ ಪತ್ರ ದೊರಕಿಸಿಕೊಡುವಂತೆ ಅಹವಾಲು ಸಲ್ಲಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ನಾಗಮ್ಮ ಅವರು ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಸೇವೆಗಳು ಸಕಾಲದಲ್ಲಿ ವಿತರಣೆಯಾಗಬೇಕು. ಪಡಿತರ ಸಮರ್ಪಕವಾಗಿ ಅರ್ಹರಿಗೆ ತಲುಪಬೇಕು. ಅರಣ್ಯದಲ್ಲಿ ಕಾಳ್ಗಿಚ್ಚು ತಡೆಯಲು ಬೇಸಿಗೆ ಸಮಯದಲ್ಲಿ ಪ್ರವಾಸಿಗರಿಗೆ ಅರಣ್ಯದೊಳಗೆ ಸಫಾರಿ ನಿಷೇಧಿಸಬೇಕು. ಗಿರಿಜನರ ಆರೋಗ್ಯ ಸೌಲಭ್ಯಕ್ಕಾಗಿ ನೀಡಿರುವ ಹಂಗಳದ ಪ್ರಾಥಮಿಕ ಆರೋಗ್ಯ ಕೇಂದ್ರದ ವಾಹನ ಚಟುವಟಿಕೆಯನ್ನು ಸುತ್ತಮುತ್ತಲಿನ ಗ್ರಾಮಗಳಿಗೆ ಚುರುಕುಗೊಳಿಸಬೇಕು ಎಂದು ಸಮಸ್ಯೆ ನಿವೇದಿಸಿಕೊಂಡರು.
ಮಂಗಲ ಗ್ರಾಮದ ನಂಜುಂಡಸ್ವಾಮಿ ಎಂಬುವವರು ಗಿರಿಜನರ ಮೂಲ ಸೌಕರ್ಯಕ್ಕಾಗಿ ಗ್ರಾಮಪಂಚಾಯಿತಿ ಹೆಚ್ಚಿನ ಅನುದಾನ ಒದಗಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಗ್ರಾಮ ಪಂಚಾಯಿತಿಯಿಂದ ಸಂಗ್ರಹವಾಗುವ ಕಂದಾಯವನ್ನು ಜನರ ಅನುಕೂಲಕ್ಕಾಗಿ ನಿರ್ವಹಣೆ ಮಾಡಬೇಕು. ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಶಾಲೆಗೆ ಆಟದ ಮೈದಾನ ಕೊರತೆಯಿದ್ದು, ವಿಶಾಲವಾಗಿರುವ ಜಾಗದಲ್ಲಿ ಶಾಲೆ ನಿರ್ಮಿಸಬೇಕು. ಅರಣ್ಯ ಇಲಾಖೆವತಿಯಿಂದ ಆನೆ ತಡೆಗಾಗಿ ಗ್ರಾಮದ ಸುತ್ತ ಫೆನ್ಸಿಂಗ್ ಅಥವಾ ಟ್ರಂಚ್‌ನ್ನು ಆದ್ಯತೆ ಮೇರೆಗೆ ತುರ್ತಾಗಿ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜಮೀನು ದುರಸ್ಥಿಯಾಗಬೇಕು. ಗ್ರಾಮದಲ್ಲಿ ಆಸ್ಪತ್ರೆ ಇದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ವಯಂಸೇವಾ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಇಲ್ಲಿನ ಮಹಿಳೆಯರು, ಗರ್ಭೀಣಿಯರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಈಗಿರುವ ಆಸ್ಪತ್ರೆ ಸರ್ಕಾರದಿಂದಲೇ ನಿರ್ವಹಣೆಯಾಗಬೇಕು. ವೈದ್ಯರು ಹಾಗೂ ನರ್ಸ್‌ಗಳ ಸ್ಥಳೀಯವಾಗಿ ವಾಸ್ತವ್ಯ ಮಾಡಬೇಕು. ಅಂಬುಲೆನ್ಸ್ ವ್ಯವಸ್ಥೆಯಾಗಬೇಕು. ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ರಸ್ತೆ, ಬಸ್ ಸಂಪರ್ಕ, ನಿರಂತರ ಜ್ಯೋತಿ ವಿದ್ಯುತ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮದ ಮುಖಂಡರೊಬ್ಬರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಅದಷ್ಟು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 
ರಸ್ತೆ ಅಭಿವೃದ್ಧಿ, ಗ್ರಾಮಕ್ಕೆ ಸಾರಿಗೆ ಬಸ್ ಸಂಪರ್ಕ, ಆಸ್ಪತ್ರೆ, ಅಂಗನವಾಡಿ, ಕುಡಿಯುವ ನೀರು, ವಸತಿ ಹಂಚಿಕೆ ಸೇರಿದಂತೆ ಸಾಕಷ್ಟು ಕುಂದುಕೊರತೆಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಸಲ್ಲಿಕೆಯಾದವು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗಳಿಗೆ ತ್ವರಿತವಾಗಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರಿಗೆ ಆಧಾರ್, ಪಡಿತರ ಸೇರಿದಂತೆ ಇನ್ನಿತರೆ ಗುರುತಿನ ಚೀಟಿಗಳನ್ನು ಪಡೆದು ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬೇಕು. ಸಾರ್ವಜನಿಕರ ಅರ್ಜಿಗಳು ಪಂಚಾಯಿತಿಮಟ್ಟದಲ್ಲಿಯೇ ಇತ್ಯರ್ಥವಾಗಬೇಕು. ಸರ್ಕಾರ ಒದಗಿಸುವ ಅನುದಾನದ ಮಿತಿಯಲ್ಲಿ ಗ್ರಾಮ ಪಂಚಾಯಿತಿಗಳು ಯೋಜನೆ, ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಅರಣ್ಯ ಹಕ್ಕು ಪತ್ರ, ಕಾಡಂಚಿನ ಗ್ರಾಮಗಳಿಗೆ ನಿರಂತರ ಜ್ಯೋತಿ ಸಂಪರ್ಕ ಸಂಬಂಧ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು. ಕಂದಾಯ ಇಲಾಖೆ ವತಿಯಿಂದ ಆರ್.ಟಿ.ಸಿ ಹಾಗೂ ಪೌತಿ ಖಾತೆ ಆಂದೋಲನ ಆಯೋಜಿಸಿ ಈ ಭಾಗದಲ್ಲಿ ಯಾರಿಗೆ ಪೌತಿ ಖಾತೆ ಅವಶ್ಯವಿದೆಯೋ ಅವರಿಗೆ ಪೌತಿ ಖಾತೆಗಳನ್ನು ಮಾಡಿಕೊಡಬೇಕು. ಅಲ್ಲದೇ ಆರ್.ಟಿ.ಸಿ ಯಲ್ಲಿ ತಿದ್ದುಪಡಿಗಳಿದ್ದರೆ ನಿಯಮಾನುಸಾರ ಪರಿಶೀಲಿಸಿ ಸರಿಪಡಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.  
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗುಂಡ್ಲುಪೇಟೆ ತಹಶೀಲ್ದಾರ್ ರವಿಶಂಕರ್ ಅವರು ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸೌಲಭ್ಯ, ಸವಲತ್ತುಗಳನ್ನು ತಲುಪಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ, ಕುಂದುಕೊರತೆ, ಅಹವಾಲುಗಳನ್ನು ನೀಡಿ ಪರಿಹಾರ ಪಡೆಯಬಹುದಾಗಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಆಧಾರ್‌ಕಾರ್ಡ್, ಪಡಿತರ ಚೀಟಿ, ವಿಕಲಚೇತನರಿಗೆ ಯು.ಡಿ.ಐಡಿ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಯವರು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.