ಚಾಮರಾಜನಗರ: ಹನೂರು ತಾಲೂಕಿನ ರಾಮಾಪುರ ಹೋಬಳಿಯ ಗೋಪಿನಾಥಂ ಗ್ರಾಮದಲ್ಲಿಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು.
ಗೋಪಿನಾಥಂ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ 'ಜಿಲ್ಲಾಧಿಕಾರಿಗಳ ನಡೆ-ಗ್ರಾಮದ ಕಡೆಗೆ' ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸೌಲಭ್ಯ, ಸವಲತ್ತುಗಳನ್ನು ತಲುಪಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ, ಕುಂದುಕೊರತೆ, ಅಹವಾಲುಗಳನ್ನು ನೇರವಾಗಿ ತಿಳಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.
ಗೋಪಿನಾಥಂ ಗ್ರಾಮ ಜಿಲ್ಲೆಯ ಗಡಿಭಾಗದಲ್ಲಿದ್ದು, ಗ್ರಾಮದ ಜನರಿಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೇಸಿಕೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಇದಕ್ಕಾಗಿ ಗ್ರಾಮದ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವ ಕೆಲಸದವಾಗಬೇಕು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಗ್ರಾಮಸ್ಥರಿಗೆ ಮೀನುಗಾರಿಕೆ ಪರವಾನಗಿ ನೀಡಬೇಕು. ಗೋಪಿನಾಥಂ ಗ್ರಾಮದ ಪಕ್ಕದಲ್ಲಿಯೇ ಹೋಗೆನಕಲ್ ಪಾಲ್ಸ್ ಇದ್ದು, ಪ್ರವಾಸಿಗರಿಗೆ ಬಂದು ಹೋಗಲು ಸುರಕ್ಷಿತ ರಸ್ತೆ ಇಲ್ಲದ್ದರಿಂದ ಸಾಕಷ್ಟು ತೊಂದರೆಗೊಳಗಾಗಿದ್ದಾರೆ ಎಂದು ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಅಹವಾಲು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಗ್ರಾಮದ ತಂಗವೇಲು ಎಂಬುವವರು ಮಾತನಾಡಿ ಜನರ ಅರ್ಥಿಕ ಸುಧಾರಣೆಗಾಗಿ ಗ್ರಾಮಕ್ಕೆ ಬ್ಯಾಂಕ್ ವ್ಯವಸ್ಥೆ ಬೇಕಾಗಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಮರ್ಪಕ ಬಸ್ ಸಂಚಾರದ ವ್ಯವಸ್ಥೆಯಾಗಬೇಕು. ಕೋವಿಡ್ ಸಂದರ್ಭ ಮತ್ತೆ ಎದುರಾದರೆ ಶಾಲಾ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಾಠ, ಪ್ರವಚನ ಕೇಳಲು ಮೊಬೈಲ್ ಟವರ್ ಅವಶ್ಯಕತೆ ಇದೆ. ಗ್ರಾಮಕ್ಕೆ ಸೇರಿದ ೩೨ ಎಕರೆ ಸರ್ಕಾರಿ ಗೋಮಾಳವಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಸ್ಟಲ್, ಅಂಗನವಾಡಿ ಹಾಗೂ ಇನ್ನಿತರೆ ಸೌಲಭ್ಯ ಬೇಕು. ಮುಖ್ಯವಾಗಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರವಿದ್ದರೂ ಶುಶ್ರೂಷಕರ ಕೊರತೆಯಿದೆ. ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ೪೦ ಕಿ.ಮೀ ದೂರದ ಮೆಟ್ಟೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಉಪಕೇಂದ್ರದಲ್ಲಿ ವೈದ್ಯರು ವಾರಕ್ಕೊಂದು ಬಾರಿ ತಂಗುವ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಮಾತನಾಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಗೋಮಾಳದಲ್ಲಿ ವಿದ್ಯಾರ್ಥಿನಿಲಯ, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳನ್ನು ತೆರೆದು ಸಮಸ್ಯೆ ಪರಿಹರಿಸುವ ಸಂಬಂಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಪ್ರಸ್ತಾವನೆ ತಯಾರಿಸಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಸಾಮಾಜಿಕ ಭದ್ರತೆ ಹಾಗೂ ಆಹಾರ ಭದ್ರತೆ ಯೋಜನೆಯಡಿ ಪಿಂಚಣಿ, ಪಡಿತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರು, ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳು ಬಾಕಿ ಇರುವ ಅರ್ಜಿಗಳನ್ನು ಮುಂದಿನ ವಾರದೊಳಗೆ ತ್ವರಿತವಾಗಿ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಪಂಚಾಯಿತಿ ಮಟ್ಟದಲ್ಲಿಯೇ ಸಮಸ್ಯೆಗಳು ಇತ್ಯರ್ಥವಾಗಬೇಕು. ಜನರಿಗೆ ನರೇಗಾದಡಿ ಹೆಚ್ಚಿನ ಕೆಲಸ ನೀಡಬೇಕು. ಈ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸಮಸ್ಯೆ ಪರಿಹರಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಗೋಪಿನಾಥಂ ಗ್ರಾಮದ ಆಸುಪಾಸಿನಲ್ಲಿರುವ ಆಲಂಬಾಡಿ, ಪುದೂರು, ಪಾಲಾರ್ ಗ್ರಾಮಗಳಿಗೆ ಬಸ್ ಸಂಪರ್ಕ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ವಹಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾ ಹಾಗೂ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಗಮನ ಹರಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಆಸ್ಪತ್ರೆ, ಅಂಗನವಾಡಿ, ಬಸ್ ಸಂಪರ್ಕ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಪಡಿತರ ಚೀಟಿ ವಿತರಣೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಿಕೆಯಲ್ಲಿ ಲೋಪಗಳು ಸೇರಿದಂತೆ ಇನ್ನಿತರೆ ಕುಂದುಕೊರತೆಗಳು ಜಿಲ್ಲಾಧಿಕಾರಿಯವರ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಕಂಡುಬಂದವು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ತ್ವರಿತವಾಗಿ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಗೋಪಿನಾಥಂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಗಾಮಿ, ಉಪಧ್ಯಕ್ಷರಾದ ನಾಗರಾಜರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ನಾಗರಾಜು ಹಾಗೂ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗೋಪಿನಾಥಂ ಗ್ರಾಮದಲ್ಲಿ ಕೊರೋನಾ ಸಂದರ್ಭದಲ್ಲಿ ಕೋವಿಡ್ ವಾರಿಯರ್‌ಗಳಾಗಿ ಉತ್ತಮ ಕಾರ್ಯ ನಿರ್ವಹಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಗೋಪಿನಾಥಂ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ, ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡಿದರು.