ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಬುಧವಾರ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನ ಪಡಸಲನತ್ತ, ಕೊಕ್ಕೆರೆ, ತೋಕೆರೆ, ಪಾಲಾರ್, ದೊಡ್ಡಾಣೆಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆ ಅಹವಾಲುಗಳನ್ನು ಆಲಿಸಿದರು.
ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ತೆರಳಿ ಅಲ್ಲಿನ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು.
ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಪಿಂಚಣಿಯನ್ನು ಗ್ರಾಮಗಳಲ್ಲಿ ವಿತರಿಸಲಾಗುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದ ಗ್ರಾಮಸ್ಥರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಆಯಾ ಗ್ರಾಮದಲ್ಲಿಯೇ ಅಂಚೆ ಇಲಾಖೆಯವರು ಪಿಂಚಣಿ ವಿತರಿಸಲು ವಾಹನ ವ್ಯವಸ್ಥೆ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರವನ್ನು ಸಂಚಾರಿ ವಾಹನಗಳ ಮೂಲಕ ತಿಂಗಳಲ್ಲಿ ಒಂದು ದಿನ ಮಾತ್ರ ವಿತರಿಸಲಾಗುತ್ತದೆ. ಆ ದಿನದಂದು ಕೆಲಸಕ್ಕಾಗಿ ಹೊರ ಹೋದವರು ಪಡಿತರದಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿ ಒಂದೆರೆಡು ದಿನಗಳು ಗ್ರಾಮಗಳಿಗೆ ಬಂದು ಪಡಿತರ ನೀಡುವಂತಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಇವರ ಅಹವಾಲಿಗೆ ಓಗೊಟ್ಟ ಜಿಲ್ಲಾಧಿಕಾರಿಯವರು ಇನ್ನುಮುಂದೆ ಎರಡು ಮೂರು ದಿನಗಳ ಕಾಲ ಪಡಿತರ ವಿತರಿಸಬೇಕೆಂದು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಗೆ ಆದೇಶಿಸಿದರು.
ಗರ್ಭಿಣಿಯರು, ಅನಾರೋಗ್ಯ ಪೀಡಿತರು ಆಸ್ಪತ್ರೆಗಳಿಗೆ ತೆರಳಲು ವಾಹನ ಸೌಲಭ್ಯ ಇಲ್ಲದಿರುವ ಬಗ್ಗೆ ಗಮನಸೆಳೆದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ವಾಹನ ಒದಗಿಸಿಕೊಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.
ಪೌತಿಖಾತೆ, ಪಿಂಚಣಿ ಅರ್ಜಿಗಳ ಸ್ವೀಕಾರ, ಪಡಿತರ ಚೀಟಿ ಸೇರಿದಂತೆ ಇತರೆ ಅವಶ್ಯಕ ಸೇವೆಗಳನ್ನು ಒದಗಿಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಅದಾಲತ್ ನಡೆಸಬೇಕು. ಸ್ಥಳದಲ್ಲಿಯೇ ಮಂಜೂರಾತಿ ನೀಡಿ ಸೌಲಭ್ಯಗಳನ್ನು ಕಲ್ಪಿಸಬೇಕು. ಅಧಿಕಾರಿಗಳ ತಂಡ ಒಟ್ಟಾಗಿ ಭೇಟಿ ನೀಡಿ ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದರು.
ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಮಲೆಮಹದೇಶ್ವರ ವನ್ಯಧಾಮದ ಉಪಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾಸ್ಪತ್ರೆಯ ಡಾ. ಎಂ. ಮಹೇಶ್, ತಹಶೀಲ್ದಾರ್ ನಾಗರಾಜ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.