ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗಿರುವ ನಗರದ ಭತ್ತ ಮತ್ತು ರಾಗಿ ಸಂಗ್ರಹಣಾ ಕೇಂದ್ರ ಹಾಗೂ ಕೊಳ್ಳೇಗಾಲದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಚಾಮರಾಜನಗರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಭೇಟಿ ನೀಡಿ ಬೆಂಬಲ ಯೋಜನೆಯಡಿ ಖರೀದಿಸಿ ಸಂಗ್ರಹಿಸಿರುವ ರಾಗಿ ದಾಸ್ತಾನನ್ನು ಪರಿಶೀಲಿಸಿದರು. ರಾಗಿಯ ಗುಣಮಟ್ಟ, ದಾಸ್ತಾನು ಪ್ರಮಾಣ ವೀಕ್ಷಿಸಿದರು. 
ನಗರದ ಎಸ್.ಎನ್.ಪಿ ಅಕ್ಕಿ ಗಿರಣಿಗೆ ಭೇಟಿ ನೀಡಿ ಭತ್ತದ ಸಂಗ್ರಹಣೆಯನ್ನು ಪರಿಶೀಲಿಸಿದರು. ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗಿರುವ ಭತ್ತದ ಪ್ರಮಾಣ ಗುಣಮಟ್ಟವನ್ನು ವೀಕ್ಷಿಸಿದರು. ರೈತರಿಂದ ಖರೀದಿಸಲಾಗಿರುವ ಭತ್ತದ ದಾಸ್ತಾನು ಸಂಬಂಧ ದಾಖಲೆಗಳನ್ನು ಪರಿಶೀಲಿಸಿದರು. ಖರೀದಿಸಿದ ಹಣ ರೈತರಿಗೆ ಸಕಾಲಕ್ಕೆ ಪಾವತಿಸಲಾಗಿದೆಯೇ ಎಂಬ ಬಗ್ಗೆ ವಿವರ ಪಡೆದುಕೊಂಡರು.  
ಕೊಳ್ಳೇಗಾಲದ ಬಳಿಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೂ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿದರು. ಕಬ್ಬು ಕಟಾವು, ಅರೆಯುವಿಕೆ, ಸಕ್ಕರೆ ಉತ್ಪಾದನೆ ಪ್ರಕ್ರಿಯೆ ವೀಕ್ಷಿಸಿದ ಜಿಲ್ಲಾಧಿಕಾರಿಯವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿಸಿರುವ ಕುರಿತು ಮಾಹಿತಿ ಪಡೆದುಕೊಂಡರು. 
ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಾಶ್‌ಕುಮಾರ್, ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ರವಿಚಂದ್ರ, ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.