ಚಾಮರಾಜನಗರ: ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದಲ್ಲಿ ಏಪ್ರಿಲ್ ೧೬ ರಂದು ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಧಿಕಾರಿಗಳೊಂದಿಗೆ ಇಂದು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.

ನೂತನವಾಗಿ ನಿರ್ಮಾಣಗೊಂಡಿರುವ ರಥವನ್ನು ಜಿಲ್ಲಾಧಿಕಾರಿಯವರು ವೀಕ್ಷಿಸಿದರು. ಪಕ್ಕದಲ್ಲೇ ರಥ ನಿಲುಗಡೆಗೆ ನಿರ್ಮಿಸಲಾಗುತ್ತಿರುವ ಕೊಠಡಿಯನ್ನು ಸಹ ಪರಿಶೀಲಿಸಿದರು. ರಥದ ಮಾರ್ಗ, ಪ್ರಸ್ತುತ ಇರುವ ಮೆಟ್ಟಿಲುಗಳನ್ನು ವೀಕ್ಷಣೆ ಮಾಡಿದರು.
ಬಿಳಿಗಿರಿರಂಗನ ದೇವಾಲಯಕ್ಕೆ ತೆರಳಿ ಅಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಪ್ರಾಚ್ಯವಸ್ತು ಇಲಾಖೆ ನಿರ್ವಹಿಸುತ್ತಿರುವ ನೆಲಹಾಸು ಕಾಮಗಾರಿ ಪರಿಶೀಲಿಸಿದರು. ರಥೋತ್ಸವ ವೇಳೆಗೆ ವಾಹನ ನಿಲುಗಡೆಗಾಗಿ ರೇಷ್ಮೆ ಇಲಾಖೆಯ ಸ್ಥಳವನ್ನು ಪರಿಶೀಲಿಸಿದರು. ಅಪೂರ್ಣವಾಗಿರುವ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸ್ಥಳದಲ್ಲಿಯೇ ಇದ್ದ ಅಧಿಕಾರಿಗೆ ಜಿಲ್ಲಾಧಿಕಾರಿಯವರು ತಾಕೀತು ಮಾಡಿದರು.
ದಾಸೋಹ ಭವನ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಭಕ್ತಾಧಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಬಂಧ ಕೈಗೊಳ್ಳಬೇಕಿರುವ ಸಿದ್ದತೆ ಹಾಗೂ ವ್ಯವಸ್ಥೆಗಳು ಕುರಿತು ಬಿಳಿಗಿರಿರಂಗನ ಬೆಟ್ಟದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ರಥೋತ್ಸವ, ಜಾತ್ರಾ ಮಹೋತ್ಸವಕ್ಕಾಗಿ ಭಕ್ತಾಧಿಗಳು ಆಗಮಿಸಲು ಕೆ.ಎಸ್.ಆರ್.ಟಿ.ಸಿ ಅಗತ್ಯ ಸಂಖ್ಯೆಗಳಲ್ಲಿ ಬಸ್ಸುಗಳ ನಿಯೋಜನೆ ಮಾಡಬೇಕು. ಯಳಂದೂರು ಪಟ್ಟಣದಲ್ಲಿಯೂ ಬಸ್ ಹಾಗೂ ಶುಚಿತ್ವ ವ್ಯವಸ್ಥೆಗಳಿಗೆ ಅವಶ್ಯ ಕ್ರಮ ತೆಗೆದುಕೊಳ್ಳಬೇಕು. ಬಿಳಿಗಿರಿರಂಗನ ಕ್ಷೇತ್ರದಲ್ಲಿ ಕುಡಿಯುವ ನೀರು ಶೌಚಾಲಯ ಇನ್ನಿತರ ವ್ಯವಸ್ಥೆಗಳನ್ನು ಭಕ್ತಾಧಿಗಳಿಗೆ ಸಮರ್ಪಕವಾಗಿ ಕಲ್ಪಿಸಬೇಕು. ಬೆಟ್ಟಕ್ಕೆ ಸಾಗುವ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬಿಳಿಗಿರಿರಂಗನಬೆಟ್ಟ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ದೇವಾಲಯದ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಥೋತ್ಸವ ಸಂದರ್ಭದಲ್ಲಿ ಆರೋಗ್ಯ ಇಲಾಖೆ, ವಿದ್ಯುತ್ ಪ್ರಸರಣ ನಿಗಮ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ನಿರ್ವಹಿಸಬೇಕಿರುವ ಜವಾಬ್ದಾರಿಯನ್ನು ತಿಳಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಬಿಆರ್‌ಟಿ ಹುಲಿ ಸಂರಕ್ಷಿತ ಯೋಜನೆ ನಿರ್ದೇಶಕರಾದ ಡಾ. ಸಂತೋಷ್‌ಕುಮಾರ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್, ತಹಶೀಲ್ದಾರ್ ಆನಂದಪ್ಪ ನಾಯಕ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ದೇವಾಲಯದ ಪ್ರಧಾನ ಅರ್ಚಕರಾದ ರವಿಕುಮಾರ್, ಅರ್ಚಕರಾದ ನಾಗೇಂದ್ರಭಟ್, ಆಗಮಿಕರಾದ ನಾಗರಾಜಭಟ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
