ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ೮ ಪರೀಕ್ಷಾ ಕೇಂದ್ರಗಳಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು ಜಿಲ್ಲಾಧಿಕಾರಿಯವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ಕೊಟ್ಟು ವೀಕ್ಷಿಸಿದರು.
ಪರೀಕ್ಷಾ ಕೇಂದ್ರಗಳಾದ ನಗರದ ಬಿ.ಆರ್ ಹಿಲ್ಸ್ ರಸ್ತೆಯ ಜೆಎಸ್‌ಎಸ್ ಬಾಲಕರ ಶಾಲೆ, ಬಾಲಕಿಯರ ಪ್ರೌಢಶಾಲೆ, ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ, ಸಿದ್ದಾರ್ಥನಗರದ ಸಂತ ಜೋಸೆಫರ ಪ್ರೌಢಶಾಲೆ, ಸೋಮವಾರಪೇಟೆಯ ಎಂ.ಸಿ.ಎಸ್ ಪ್ರೌಢಶಾಲೆ, ಕರಿನಂಜನಪುರದ ಯೂನಿವರ್ಸಲ್ ಪ್ರೌಢಶಾಲೆ ಮತ್ತು ಚನ್ನಿಪುರ ಮೋಳೆ ರಸ್ತೆಯಲ್ಲಿರುವ ಸೇವಾ ಭಾರತಿ ಪ್ರಾಥಮಿಕ ಇಂಗ್ಲೀಷ್ ಶಾಲೆಗೆ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಪರೀಕ್ಷಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಜಿಲ್ಲಾಧಿಕಾರಿಯವರು ಪರೀಕ್ಷಾ ಕೇಂದ್ರಗಳಿಗೆ ವ್ಯಾಪಕವಾಗಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಖುದ್ದು ವೀಕ್ಷಣೆ ಮಾಡಿದರು.
ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾಗಿರುವ ಮುಖ್ಯ ಅಧೀಕ್ಷಕರು ಹಾಗೂ ಮೇಲುಸ್ತುವಾರಿ ಕಾರ್ಯನಿರ್ವಹಿಸಲು ಪ್ರತೀ ಕೇಂದ್ರಕ್ಕೆ ಪರೀಕ್ಷಾ ಕೇಂದ್ರದ ನಿಯಂತ್ರಕರನ್ನಾಗಿ ನಿಯೋಜಿಸಲಾಗಿದ್ದ ಹಿರಿಯ ಅಧಿಕಾರಿಗಳಿಂದ ಪರೀಕ್ಷಾ ಕಾರ್ಯಗಳ ಕುರಿತು ಮಾಹಿತಿ ಪಡೆದರು.
ಪಾರದರ್ಶಕವಾಗಿ ಪರೀಕ್ಷೆ ನಡೆಯಲು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾ ಇನ್ನಿತರ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿಯವರು ವೀಕ್ಷಿಸಿದರು.
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲನೆ ಪತ್ರಿಕೆಯ ಪರೀಕ್ಷೆ ಇಂದು ನಡೆದಿದ್ದು ಒಟ್ಟು ೧೮೪೪ ಅಭ್ಯರ್ಥಿಗಳ ಪೈಕಿ ೧೩೦೬ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ೫೩೮ ಅಭ್ಯರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅವರು ತಿಳಿಸಿದ್ದಾರೆ.