ಚಾಮರಾಜನಗರ: ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣರಾಜ ಹಾಗೂ ಕಬಿನಿ ಜಲಾಶಯದಿಂದ ಹೆಚ್ಚು ನೀರನ್ನು ಕಾವೇರಿ ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ದರಿಂದ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ನದಿ ಪಾತ್ರದಲ್ಲಿ ಬರುವ ಮುಳ್ಳೂರು, ಹಳೆಹಂಪಾಪುರ, ದಾಸನಪುರ, ಹಳೆಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಯಡಕುರಿಯ, ಸತ್ತೇಗಾಲ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಮುಂಜಾಗ್ರತಾ ಕ್ರಮವಹಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದರು. ಗ್ರಾಮಗಳ ಜನರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು ಜಿಲ್ಲಾಡಳಿತವು ವಿಪತ್ತು ಸಂದರ್ಭವನ್ನು ಎದುರಿಸಲು ಸನ್ನದ್ದವಾಗಿದೆ ಎಂದರು.
ಜನರಿಗೆ ಯಾವುದೇ ತೊಂದರೆಯಾಗದಿರಲು ಕಾವೇರಿ ನದಿ ಪಾತ್ರದಲ್ಲಿ ಬರುವ ದಾಸನಪುರ, ಮುಳ್ಳೂರು ಗ್ರಾಮಗಳಲ್ಲಿ ನದಿಯ ದಂಡೆಗೆ ಹೋಗುವ ಎಲ್ಲಾ ದಾರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಜುಲೈ ೧೧ ರಂದು ಬೆಳಿಗ್ಗೆ ೯ ಗಂಟೆ ಸುಮಾರಿಗೆ ಕೆ.ಆರ್.ಎಸ್. ನಿಂದ ೭೨,೯೬೪ ಕ್ಯೂಸೆಕ್ ಹಾಗೂ ಕಬಿನಿ ಜಲಾಶಯದಿಂದ ೨೩.೭೫೦ ಕ್ಯೂಸೆಕ್ ಒಟ್ಟು ೯೭೦೨.೮ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸಾರ್ವಜನಿಕರ ಸುರಕ್ಷಿತ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ನದಿ ದಂಡೆಯಲ್ಲಿ ಸ್ನಾನ ಮಾಡುವುದು, ಬಟ್ಟೆ ಒಗೆಯುವುದು, ಜಾನುವಾರು ತೊಳೆಯುವುದು, ಈಜುವುದು ಇನ್ನಿತರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದರು.
ಕಂದಾಯ ಇಲಾಖೆ, ಅಗ್ನಿ ಶಾಮಕ ಇಲಾಖೆ, ಪೊಲೀಸ್ ಮತ್ತು ಹೋಂ ಗಾರ್ಡ್ ಇಲಾಖೆ, ತಾಲ್ಲೂಕು ಪಂಚಾಯಿತಿ ಇಲಾಖೆ ಮತ್ತು ಇನ್ನಿತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ೨೪೭ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಾರ್ವಜನಿಕರನ್ನು ಸ್ಥಳಾಂತರಿಸುವ ಸಂದರ್ಭ ಬಂದಲ್ಲಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಯಾವುದೇ ಪ್ರವಾಹ ವಿಪತ್ತು ಸಂದರ್ಭವನ್ನು ಎದುರಿಸಲು ಸಿದ್ದರಾಗಿರಬೇಕು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂಗಳು ೨೪೭ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಈ ಸಂದರ್ಭದಲ್ಲಿ ಹಾಜರಿದ್ದರು.