ಚಾಮರಾಜನಗರ:ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೌರಕಾರ್ಮಿಕರಿಗೆ ವಸತಿ, ವೇತನ ಪಾವತಿ ಸೇರಿದಂತೆ ವಿವಿಧ ಸೌಲಭ್ಯ, ಸವಲತ್ತುಗಳನ್ನು ಹೊಣೆಗಾರಿಯಿಂದ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜು.೦೮) ನಡೆದ ಮ್ಯಾನುವೆಲ್ ಸ್ಕ್ಯಾವೆಂಜರ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಠಾನದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ವಿವಿಧ ಗ್ರಾಮಪಂಚಾಯಿತಿ ಹಾಗೂ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ, ವೇತನ ಪಾವತಿ, ಸಮುದಾಯ ಭವನ, ವಿಶ್ರಾಂತಿ ಗೃಹ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಹಕ್ಕುಪತ್ರ ನೀಡಿಕೆ, ಸ್ಮಶಾನ ಸೇರಿದಂತೆ ಇತರೆ ಅಗತ್ಯ ಸವಲತ್ತುಗಳನ್ನು ಅದಷ್ಟು ಶೀಘ್ರವಾಗಿ ತಲುಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದರು.
ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಮಾಸ್ಟರ್ ಚೆಕ್‌ಅಪ್ ಅನ್ನು ನಿಯಮಿತವಾಗಿ ನಡೆಸಬೇಕು. ವೇತನ ಪಾವತಿಗೆ ಸಂಬಂಧಿಸಿದಂತೆ ಇ.ಎಸ್.ಐ ಹಾಗೂ ಪಿಎಫ್ ಕ್ರಮಬದ್ಧವಾಗಿ ಕಟಾವಣೆಯಾಗುತ್ತಿರುವುದನ್ನು ಗಮನಿಸಬೇಕು. ಹಲವೆಡೆ ಕುಡಿಯುವ ನೀರಿಗಾಗಿ ನಿರ್ಮಿಸಿರುವ ತೊಂಬೆಗಳು ಕಳಪೆ ಕಾಮಗಾರಿಯಿಂದ ಕೂಡಿದ್ದು, ಈ ಬಗ್ಗೆ ಸ್ಥಳ ಪರಿಶೀಲಿಸಿ ನೀರಿನ ತೊಂಬೆ ನಿರ್ಮಿಸಿರುವ ಏಜೆನ್ಸಿಗೆ ಅವರ ಸ್ವಂತ ಖರ್ಚಿನಲ್ಲಿ ದುರಸ್ಥಿಪಡಿಸಲು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ವಿಶ್ರಾಂತಿಗೃಹ ಹಾಗೂ ಶೌಚಾಲಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದೆಡೆ ಈ ಕಾಮಗಾರಿಗಳನ್ನು ತುರ್ತಾಗಿ ಮಾಡಿಕೊಡಬೇಕಾಗಿದೆ. ಗೃಹಭಾಗ್ಯ ಯೋಜನೆಯಡಿ ಜಿಲ್ಲೆಯ ಕೆಲವೆಡೆ ಸ್ವಂತ ಸೂರು ಸಿಗದೇ ಊರಿನ ಹೊರಗೆ ಟೆಂಟ್‌ನಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿರುವ ಪೌರಕಾರ್ಮಿಕರಿಗೆ ವಸತಿಗೆ ಕೊರತೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ವಸತಿಗಾಗಿ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದರೂ ಅದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸದಿರುವುದು ವಿಪರ್ಯಾಸವಾಗಿದೆ. ಎಲ್ಲಾ ಪೌರಕಾರ್ಮಿಕರಿಗೆ ವಸತಿ ಯೋಜನೆಯಡಿ ಸ್ವಂತ ಸೂರು ಹೊಂದಲು ಅವಕಾಶವಾಗುವಂತೆ ಪೌರಕಾರ್ಮಿಕರಿಗೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ವಸತಿ ಇಲ್ಲವಾಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದೊಳಗೆ ಸ್ಥಳ ಪರಿಶೀಲನೆ ನಡೆಸಿ ಪಟ್ಟಿ ತಯಾರಿಸಿ ವರದಿ ಸಲ್ಲಿಸಬೇಕು. ಅಗತ್ಯವಿದ್ದರೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಏರ್ಪಡಿಸಲಾಗುವ ಆರೋಗ್ಯ ಶಿಬಿರಗಳಲ್ಲಿ ತಪಾಸಣೆಯೊಂದಿಗೆ ಆರೋಗ್ಯ ವಿಮೆ ಮಾಡಿಸಿಕೊಡಲು ಕ್ರಮ ವಹಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ, ಜಾಗೃತಿ ಸಮಿತಿ ಸದಸ್ಯರಾದ ಶಂಕರ್, ಗೋಪಾಲ್, ಭಾಗ್ಯ, ಪುಷ್ಪಲತ, ನಗರಸಭೆ ಕಂದಾಯ ನಿರೀಕ್ಷಕರಾದ ಶರವಣ, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಹಾಜರಿದ್ದರು.
