
ಚಾಮರಾಜನಗರ: ರಕ್ತದಾನವು ಅತ್ಯಂತ ಮಹತ್ವದ್ದಾಗಿದ್ದು ದೈಹಿಕವಾಗಿ ಸಧೃಡರಿರುವವರು, ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಕಂದಾಯ ಇಲಾಖೆಯ ನೌಕರರ ಸಂಘ, ಗ್ರಾಮ ಸಹಾಯಕರ ಸಂಘ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಸುಂದರೆಗೊಂದು ದಿನ ಹಾಗೂ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುರ್ತು ಪರಿಸ್ಥಿತಿಗೆ ಅನುಗುಣವಾಗಿ ರಕ್ತದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯವಂತರು ದೈಹಿಕವಾಗಿ ಸಧೃಢರಾಗಿರುವವರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಇದರಿಂದ ರಕ್ತದ ಕೊರತೆಯನ್ನು ಜಿಲ್ಲೆಯಲ್ಲಿ ನೀಗಿಸಬಹುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಕಂದಾಯ ದಿನಾಚರಣೆಯ ಪ್ರಯುಕ್ತಯ ರಕ್ತದಾನ ಶಿಬಿರ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ. ನೀರು ಮತ್ತು ರಕ್ತ ಎರಡೂ ಕೂಡ ಜೀವ ಉಳಿಸುವ ಅತ್ಯಮೂಲ್ಯ ವಸ್ತುವಾಗಿದೆ. ಸಧೃಡರು ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ. ಜೀವ ಕಾಪಾಡುವಲ್ಲಿ ರಕ್ತದಾನ ಅತ್ಯಂತ ಮುಖ್ಯವಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಕೋವಿಡ್ ಸಂಧರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ನೌಕರ ವರ್ಗದವರು ಕೋವಿಡ್ ತಡೆಯಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಶಿಬಿರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ರಕ್ತದಾನ ಮಾಡಿರುವುದರಿಂದ ಇನ್ನಷ್ಟು ಜನ ರಕ್ತದಾನ ಮಾಡಲು ಪ್ರೇರೇಪಿತರಾಗುತ್ತಾರೆ ಎಂದರು.
ಇದೇ ವೇಳೆ ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಗಣ್ಯರು ಪ್ರಮಾಣ ಪತ್ರವನ್ನು ವಿತರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಮಹೇಶ್, ತಹಶೀಲ್ದಾರ್ ಬಸವರಾಜು ಇನ್ನಿತರರು ಪಾಲ್ಗೊಂಡಿದ್ದರು.
