ಚಾಮರಾಜನಗರ: ತಾಲೂಕಿನ ಮಸಗಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ತಾಲೂಕಿನ ಮಸಗಾಪುರ ಗ್ರಾಮದ ಜಯಕಾಂತಿ ಎಂಬವರಿಗೆ ಸಂಸ್ಥೆಯ ಜಿಲ್ಲಾ ಯೋಜನಾ ನಿರ್ದೇಶಕಿ ಲೀಲಾವತಿ ಅಡುಗೆ ಪಾತ್ರೆಗಳು, ಚಾಪೆ, ಕಂಬಳಿ, ದಿಂಬು, ಬುಟ್ಟಿ ಸೇರಿದಂತೆ ಇತರೇ ವಸ್ತುಗಳನ್ನು ವಿತರಿಸಿದರು.
ಇದೇವೇಳೆ ಅವರು ಮಾತನಾಡಿ, ಇಂದಿನದಿನಗಳಲ್ಲಿ ಹೆತ್ತಮಕ್ಕಳೇ ತಂದೆತಾಯಂದಿರನ್ನು ನೋಡಿಕೊಳ್ಳದೇ ಅವರನ್ನು ವೃದ್ದಾಶ್ರಮಕ್ಕೆ ಸೇರಿಸುವ ವಾತಾವರಣ ಕಂಡುಬರುತ್ತಿದೆ, ಹೇಮಾವತಿಹೆಗಡೆ ಅವರ ಆಶಯದಂತೆ ೬೦ ವರ್ಷ ದಾಟಿದವರ ಯೋಗಕ್ಷೇಮನೋಡಿಕೊಳ್ಳದವರು, ಅವರ ಯೋಗಕ್ಷೇಮ ವಿಚಾರಿಸಿಕೊಂಡು, ಅಂತಹವರನ್ನು ಗುರುತಿಸಿ ಪ್ರತಿತಿಂಗಳು ೭೫೦ ರಿಂದ ೧೫೦೦ ರವರಗೆ ಮಾಸಾಶನ ನೀಡಲಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ ೫೯ ಮಂದಿ ಸದಸ್ಯರಿಗೆ ಮಾಸಾಶನ ವಿತರಣೆಮಾಡಲಾಗುತ್ತಿದೆ ಎಂದರು.
ರಾಮಸಮುದ್ರ, ನಾಗವಳ್ಳಿ, ದಡದಹಳ್ಳಿ, ಅರಳೀಕಟ್ಟೆ, ಕೆಂಗಾಕಿ, ಬಿಸಲವಾಡಿ, ಕೆಬ್ಬೇಪುರ, ಮಸಗಾಪುರ, ನಂಜೇದೇವನಪುರ ಗ್ರಾಮಗಳ ೧೬ ಮಂದಿಸದಸ್ಯರು ಸೇರಿದಂತೆ ಜಿಲ್ಲೆಯಲ್ಲಿ ೧೦೧ ಮಂದಿ ಸದಸ್ಯರಿಗೆ ವಾತ್ಸಲ್ಯ ಕಿಟ್ ವಿತರಿಸಲಾಗಿದೆ ಎಂದರು.
ಜ್ಞಾನವಿಕಾಸ ಕಾರ್ಯಕ್ರಮ ನಿರ್ದೇಶಕ ವಿಠಲಪೂಜಾರಿ, ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್‌ಶೆಟ್ಟಿ, ಸಮನ್ವಯಾಧಿಕಾರಿ ಶೃತಿಸಚಿನ್, ಜಿಲ್ಲಾಜನಜಾಗೃತಿವೇದಿಕೆ ಅಧ್ಯಕ್ಷ ರಾಜಶೇಖರ ಆರಾಧ್ಯ, ಗ್ರಾಮದ ಮುಖಂಡರು, ಸಂಸ್ಥೆಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಜರಿದ್ದರು.