• ಜಾರಿಗೆ ತಂದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ಅನುದಾನ ಕೊಡಲು ಸಹಕಾರ ಇಲಾಖೆ ಬದ್ಧ; ಸಚಿವ ಸೋಮಶೇಖರ್

• 11ರಿಂದ ಜನಸೇವಕ ಸಮಾವೇಶ- ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣ

ಮೈಸೂರು: ರಾಜ್ಯದ ಜನರಿಂದ ಯಶಸ್ವಿನಿ ಯೋಜನೆ ಮರು ಜಾರಿ ಬಗ್ಗೆ ಬೇಡಿಕೆಗಳು ಬರುತ್ತಲೇ ಇದೆ. ಆದರೆ, ಈಗಾಗಲೆ ಆಯುಷ್ಮಾನ್ ಭಾರತ ಯೋಜನೆಯಡಿ ರಾಜ್ಯ ಸರ್ಕಾರದ ಯೋಜನೆ ಸೇರಿಕೊಂಡಿರುವುದರಿಂದ ಯಶಸ್ವಿನಿ ಜಾರಿ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಈ ಯೋಜನೆ ಜಾರಿಗೆ ತರುವುದಿದ್ದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ರೂಪಾಯಿ ಅನುದಾನವನ್ನು ಸಹಕಾರ ಇಲಾಖೆ ಮೂಲಕ ಕೊಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಘೋಷಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಆಗಿನ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅವರು ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿದ್ದರು. ಈಗ ಅದನ್ನು ಬದಲಾಯಿಸಬೇಕು. ಹೀಗಾಗಿ ಯಶಸ್ವಿನಿ ಜಾರಿಗೆ ತಾಂತ್ರಿಕ ತೊಡಕುಗಳಿದ್ದು, ಸದ್ಯ ಆರೋಗ್ಯ ಇಲಾಖೆಯಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಆರೋಗ್ಯ ಸಚಿವರು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಜೊತೆಗೆ ನನಗೂ ಸಹ ಹಲವರು ಯಶಸ್ವಿನಿ ಮರು ಜಾರಿ ಬಗ್ಗೆ ಮನವಿ ಸಲ್ಲಿಸುತ್ತಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಎಲ್ಲ ಸಹಕಾರ ಸಂಸ್ಥೆಗಳಿಂದ ಯಶಸ್ವಿನಿಗೆ ಹಣ ಸಂಗ್ರಹ

ನಾನು ಸಹ ರಾಜ್ಯದಲ್ಲಿ ಪುನಃ ಯಶಸ್ವಿನಿಯನ್ನು ಜಾರಿಗೆ ತರಬೇಕು ಎಂಬ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಇದರ ವಿಷಯವಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಜೊತೆಯೂ ಮಾತನಾಡಿದ್ದೇನೆ. ಅವರೂ ಸಹ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ ಸಚಿವರಾದ ಸೋಮಶೇಖರ್, ಎಲ್ಲ ಸಹಕಾರ ಸಂಸ್ಥೆಗಳ ಮೂಲಕ ಹಣ ಸಂಗ್ರಹಿಸಿ ಯೊಜನೆಗೆ ತಗುಲುವ ಸುಮಾರು 400 ಕೋಟಿ ರೂಪಾಯಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ನಾವು ಗೆದ್ದಿದ್ದರ ಬಗ್ಗೆಯಷ್ಟೇ ಹೇಳಿಕೊಂಡಿದ್ದೇವೆ
ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಬಿಜೆಪಿಯೇ ಗೆದ್ದಿದೆ ಎಂದು ನಾವು ಎಂದೂ ಹೇಳಿಕೊಂಡಿಲ್ಲ. 1322 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಅಷ್ಟೂ ನಾಲ್ಕು ಸಾವಿರ ಸ್ಥಾನಗಳನ್ನು ನಾವೇ ಗೆದ್ದಿದ್ದೇವೆಂದು ಹೇಳಿಕೊಂಡಿಲ್ಲವಲ್ಲ. ಕಾಂಗ್ರೆಸ್-ಜೆಡಿಎಸ್ ನವರು ಅವರ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಆದರೆ, ನಾವು ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಸ್ಥಾನವನ್ನು ಗೆದ್ದಿದ್ದೇವೆಂಬ ಬಗ್ಗೆ ದಾಖಲೆ ಸಮೇತ ಮಾಹಿತಿಯನ್ನು ಕೊಟ್ಟಿದ್ದೇವೆ, ನಾವು ಗೆದ್ದಿದ್ದರ ಬಗ್ಗೆಯಷ್ಟೇ ಹೇಳಿಕೊಂಡಿದ್ದೇವೆ ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.

ಜಿಪಂನಲ್ಲಿ ಹೆಚ್ಚು ಸ್ಥಾನ ಗೆಲ್ಲುವೆವು-ಸಚಿವರ ವಿಶ್ವಾಸ
ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಇದನ್ನು ನಾವು ದಾಖಲೆ ಸಹಿತವೇ ನೀಡಿದ್ದೇವೆ. ಅಲ್ಲದೆ, ಇನ್ನು ಮುಂದೆ ಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದೇವೆ. ಇನ್ನು ಮೈಸೂರಿನಲ್ಲಿ 252 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಅದರಲ್ಲಿ ಸದ್ಯದ ಮಟ್ಟಿಗೆ 80 ಸ್ಥಾನಗಳನ್ನು ನಾವು ಸುಲಭವಾಗಿ ಗೆಲ್ಲಲಿದ್ದೇವೆ. ಉಳಿದ ಸ್ಥಾನಗಳನ್ನು ಗೆಲ್ಲುವುದು ಹಾಗೂ ತಂತ್ರಗಾರಿಕೆ ನಡೆಸುವುದರ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು. ಇದಕ್ಕೋಸ್ಕರ ವಿಭಾಗಗಳನ್ನು ರಚಿಸಿಕೊಂಡು ಒಂದು ತೀರ್ಮಾನಕ್ಕೆ ಬರಲಾಗುವುದು. ಈಗಲೇ ಖಚಿತವಾಗಿ ಹೇಳಲಾಗದು ಎಂದು ಪ್ರಶ್ನೆಯೊಂದಕ್ಕೆ ಸಚಿವರಾದ ಸೋಮಶೇಖರ್ ಉತ್ತರಿಸಿದರು.

11ರಿಂದ ಜನಸೇವಕ ಸಮಾವೇಶ-ಅಶ್ವತ್ಥ್ ನಾರಾಯಣ
ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್ ಮಾತನಾಡಿ, ನವೆಂಬರ್ 11ರಂದು ಬಿಜೆಪಿಯಿಂದ ಜನಸೇವಕ ಸಮಾವೇಶಕ್ಕೆ ಚಾಲನೆ ನೀಡಲಾಗುತ್ತಿದೆ. ಇದು ರಾಜ್ಯದ 30 ಜಿಲ್ಲೆಗಳಲ್ಲಿಯೂ ನಡೆಲಿದ್ದು, ಒಟ್ಟು 5 ತಂಡಗಳು ಒಂದೊಂದು ವಿಭಾಗದ ಉಸ್ತುವಾರಿಯನ್ನು ವಹಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ. ಮೈಸೂರಿನಲ್ಲಿ ಸಮಾವೇಶ ಉದ್ಘಾಟನೆಗೊಳ್ಳಲಿದ್ದು, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಂದ ಚಾಲನೆ ಸಿಗಲಿದೆ. ಬೆಂಗಳೂರಿನಲ್ಲಿ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಿಗೆ ಸನ್ಮಾನ
ಸೋಮವಾರ ಮೈಸೂರು ಹಾಗೂ ಚಾಮರಾಜನಗರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವರಾದ ಸೋಮಶೇಖರ್, ಕಂದಾಯ ಸಚಿವರಾದ ಆರ್. ಅಶೋಕ್, ಸಂಸದ ಪ್ರತಾಪ್ ಸಿಂಹ ಹಾಗೂ ನಾನು ಸಹ ಒಂದು ತಂಡವಾಗಿ ಭಾಗವಹಿಸಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

By admin