ಚಾಮರಾಜನಗರ: ಕನ್ನಡ ಚಿತ್ರರಂಗದ ಬೆಳವಣಿಗೆಗೆ ಯುವ ನಿರ್ದೇಶಕರು ಸಾಧನೆ ಮಾಡಬೇಕಿದೆ. ಕಠಿಣ ಶ್ರಮ ,ಬುದ್ಧಿವಂತಿಕೆ, ಸೃಜನಶೀಲತೆಯ ಮೂಲಕ ಶ್ರೇಷ್ಠ ಚಿತ್ರಗಳ ರಚನೆಗೆ ನಿರ್ದೇಶಕರ ಪಾತ್ರ ಅಪಾರವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈಹಿಂದ್ ಪ್ರತಿಷ್ಠಾನ ಮತ್ತು ಗಡಿನಾಡ ಜನಪದ ಕೋಗಿಲೆಗಳ ವೇದಿಕೆ ಚಂದಕವಾಡಿಯ ಶ್ರೀ ಲಕ್ಷ್ಮೀ ದೇವಸ್ಥಾನದ ಅರಳಿಕಟ್ಟೆಯಲ್ಲಿ ನಿರ್ದೇಶಕ ಚಂದಕವಾಡಿಯ ರಘು ಶಾಸ್ತ್ರಿ ರವರನ್ನೂ ಸನ್ಮಾನಿಸಿ ಗೌರವಿಸಿ.ಮಾತನಾಡಿ ಜಿಲ್ಲೆಯು ಕನ್ನಡ ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದೆ. ರಾಜಕುಮಾರ್, ಸುಂದರ ಕೃಷ್ಣ ಅರಸ್,ರಾಮನಾಥ್ ಋಗ್ವೇದಿ, ಹ ಸೂ ರಾಜಶೇಖರ್ ಮುಡಿಗುಂಡ ಮಹೇಶ್, ಮುಂತಾದ ನಟರು ಹಾಗೂ ನಿರ್ದೇಶಕರು ಜಿಲ್ಲೆಯ ಹೆಸರನ್ನು ವಿಶ್ವ ವಿಖ್ಯಾತ ಗೊಳಿಸಿದ್ದಾರೆ.
ಚಂದಕ ವಾಡಿಯ ಯುವಕ ಎಂಬಿಎ ಮತ್ತು ಪತ್ರಿಕೋದ್ಯಮದ ಪದವೀಧರರಾಗಿ ತಮ್ಮ ಮೂರನೇ ಚಿತ್ರದ ಲೈನ್ ಮ್ಯಾನ್ ಕನ್ನಡ ಚಿತ್ರರಂಗದ ನಿರ್ದೇಶನವನ್ನು ತಮ್ಮ ಸ್ವಂತ ಗ್ರಾಮದಲ್ಲೇ ನಡೆಸುತ್ತಿರುವುದು ಮೆಚ್ಚುಗೆಯ ಸಂಗತಿ.
ಚಂದಕವಾಡಿ ಸುವರ್ಣಾವತಿ ನದಿ ತೀರದ ರಮಣೀಯ ಪ್ರಕೃತಿ ಸೊಬಗಿನಿಂದ ಕೂಡಿದ್ದು, ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ . ರಘು ಶಾಸ್ತ್ರಿ ರವರಿಗೆ ಕನ್ನಡಿಗರ ಆಶೀರ್ವಾದ ಸದಾ ಇರಲಿ ಲೈನ್ ಮ್ಯಾನ್ ಚಿತ್ರ ಯಶಸ್ವಿಯಾಗಲಿ ಎಂದು ತಿಳಿಸಿ ಮೈಸೂರು ಪೇಟ, ಶಾಲು, ಕನ್ನಡ ಪುಸ್ತಕ ನೀಡಿ ಗೌರವಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯುವ ನಿರ್ದೇಶಕ ರಘು ಶಾಸ್ತ್ರಿ ಚಂದಕ ವಾಡಿ ಗ್ರಾಮ ನನ್ನ ಪೂರ್ವಜರ ಗ್ರಾಮ. ಹುಟ್ಟಿ ಬೆಳೆದ ಹಳ್ಳಿಯಲ್ಲಿ ಸಿನಿಮಾ ತೆಗೆಯುವ ಕಾರ್ಯಕ್ಕೆ ಗ್ರಾಮದ ಜನತೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜೈಹಿಂದ್ ಪ್ರತಿಷ್ಠಾನ ನನ್ನನ್ನು ಗೌರವಿಸಿ, ನನಗೆ ಸ್ಪೂರ್ತಿ ತಂದಿದೆ ಎಂದರು.
ಚಂದಕವಾಡಿ ಗ್ರಾಮದಲ್ಲಿ ಲೈನ್ ಮ್ಯಾನ್ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿದ್ದವಾಗುತ್ತಿದೆ. ಚಂದಕವಾಡಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದೆ. ನಾಯಕ ನಟ ತ್ರಿಗುಣ, ಜಯಶ್ರೀ ಮುಂತಾದವರು ನಟಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಗಡಿನಾಡ ಜನಪದ ಗಾಯಕ ಜ. ಸುರೇಶ್ ನಾಗ್ ಹರದನಹಳ್ಳಿ, ಚಂದಕವಾಡಿ ಕೇಶವ ಮೂರ್ತಿ, ಫ್ರೂಟ್ಸ್ ರವಿ, ಕಪಿನಿನಾಯಕ, ವಿಶ್ವನಾಥ್,ಗೀತಾ ಉಪಸ್ಥಿತರಿದ್ದರು.
