
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಬುಧವಾರ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಕಾರ್ಯವನ್ನು ಪರಿಶೀಲಿಸಿದರು.

ಚಾಮರಾಜನಗರ ತಾಲೂಕಿನ ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಲಸಿಕಾಕರಣವನ್ನು ವೀಕ್ಷಿಸಿದರು.
ಇದುವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಲಸಿಕೆ ನೀಡುವಲ್ಲಿ ಆಗಿರುವ ಪ್ರಗತಿ ಪರಿಶೀಲಿಸಿದರು. ಎರಡನೇ ಡೋಸ್ ಲಸಿಕಾಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು. ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಶ್ವೇಶ್ವರಯ್ಯ ಅವರು ಸ್ಥಳೀಯ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅರ್ಹ ಹಿರಿಯ ನಾಗರಿಕರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯವನ್ನು ತ್ವರಿತಗೊಳಿಸಬೇಕು. ೧೫ ರಿಂದ ೧೮ರ ವಯಸ್ಸಿನ ಮಕ್ಕಳ ಲಸಿಕಾಕರಣವು ಸಹ ನಡೆಯಬೇಕು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅಗತ್ಯ ಕ್ರಮಕ್ಕೆ ಸೂಚಿಸಬೇಕು. ಒಟ್ಟಾರೆ ಅರ್ಹರೆಲ್ಲರೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯುವ ಮೂಲಕ ಶೇ. ೧೦೦ರಷ್ಟು ಪ್ರಗತಿಗೆ ಪೂರಕ ಕ್ರಮವಹಿಸಬೇಕೆಂದು ಡಾ. ವಿಶ್ವೇಶ್ವರಯ್ಯ ಅವರು ತಿಳಿಸಿದರು.
