ಮಂಡ್ಯ: ಕೊರೋನಾ ಲಾಕ್ ಡೌನ್ ನಿಂದಾಗಿ ಕೂಲಿ ಮಾಡಿ ಜೀವನ ನಡೆಸುವ ನಿರ್ಗತಿಕರು ಮತ್ತು ಬಡವರ ಬದುಕು ತೀರಾ ಸಂಕಷ್ಟಕ್ಕೀಡಾಗಿದ್ದು ಅಂತಹವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೆರವು ನೀಡುತ್ತಿದ್ದಾರೆ.

ಈಗಾಗಲೇ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಸುಮಾರು ಅರುತ್ತನಾಲ್ಕು ನಿರ್ಗತಿಕ ವಯೋವೃದ್ಧರಿಗೆ ನಗದು ರೂಪದಲ್ಲಿ ಮಾಸಾಶನ ನೀಡಿ ಸಹಾಯ ಮಾಡಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಅವರು ತಾಲೂಕಿನ ಬೂಕನಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶ್ರೀ ಕ್ಷೇತ್ರದ ವತಿಯಿಂದ ನಿಧಿಯಿಂದ ನಿರ್ಗತಿಕರಿಗೆ ನೆರವು ಯೋಜನೆಯ ಅಡಿಯಲ್ಲಿ ೬೪ಮಂದಿ ವಯೋ ವೃದ್ಧರಿಗೆ ತಲಾ ೭೫೦ ರೂಪಾಯಿಗಳಂತೆ ೪೮ ಸಾವಿರ ರೂಪಾಯಿಗಳ ನಗದು ರೂಪದಲ್ಲಿ ಮಾಸಾಶನವನ್ನು ವಿತರಿಸಲಾಗಿದೆ. ಪ್ರತಿ ತಿಂಗಳು ಬಡ ನಿರ್ಗತಿಕರಿಗೆ ಮಾಶಾಸನವನ್ನು ನೀಡುತ್ತಿತ್ತು. ಆದರೆ ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ಮನೆ ಮನೆಗೆ ಹೋಗಿ ವಿತರಣೆ ಮಾಡಲಾಗುತ್ತಿರುವುದಾಗಿ ಹೇಳಿದರು.

ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಖಾವಂದರ ಆದೇಶದ ಮೇರೆಗೆ ಸರಕಾರಿ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿಗೆ ಅನುಕೂಲವಾಗುವಂತೆ ಬಡ ಮಕ್ಕಳಿಗೆ ಪ್ರತಿ ತಾಲೂಕಿನ ಸುಮಾರು ೧೫೦ರಿಂದ ೨೦೦ಮಂದಿಗೆ ಟ್ಯಾಬ್ ವಿತರಣೆ ಮಾಡಿದ್ದು,. ನಿರ್ಗತಿಕರಿಗೆ ಅಗತ್ಯ ವಸ್ತುಗಳಾದ ಪಾತ್ರೆ, ಚಾಪೆ, ಕಂಬಳಿಯನ್ನು ಹೇಮಾವತಿ ಹೆಗ್ಗಡೆಯವರ ವಿಶೇಷ ಆಸಕ್ತಿಯ ಮೇರೆಗೆ ವಿತರಣೆ ಮಾಡಲಾಗಿದೆ. ಜತೆಗೆ ವಿಶೇಷ ಸಾಲ ಸೌಲಭ್ಯವನ್ನು ಮಹಿಳಾ ಸಂಘಗಳ ಸದಸ್ಯರಿಗೆ ನೀಡಲಾಗಿದೆ. ಇಷ್ಟೇ ಅಲ್ಲದೆ ಲಾಕ್ ಡೌನ್ ಅವಧಿಯಲ್ಲಿ ಸಾಲ ವಸೂಲಾತಿಯನ್ನು ಬಂದ್ ಮಾಡಿ ಮಹಿಳಾ ಸಂಘಗಳ ಸದಸ್ಯರಿಗೆ ಸಾಲದ ಕಂತು ಕಟ್ಟಲು ತೊಂದರೆಯಾಗದಂತೆ ಅನುಕೂಲ ಮಾಡಿಕೊಟ್ಟಿರುವುದಾಗಿ ಹೇಳಿದರು.

ಗ್ರಾಮೀಣ ಭಾಗದ ಜನರಿಗೆ ವಾಹನಗಳ ತೊಂದರೆಯಾಗುತ್ತಿರುವುದನ್ನು ಗಮನಿಸಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣಭಾಗದ ಕೊರೊನಾ ಪೀಡಿತರಿಗೆ ಅನುಕೂಲಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಪ್ರಯಾಣಿಕರ ವಾಹನಗಳನ್ನು ಓಡಿಸುತ್ತಿದ್ದು, ಯಾರಿಗೆ ವಾಹನದ ಅವಶ್ಯಕತೆ ಇರುತ್ತದೆಯೋ ಅವರು ಸಂಘದ ಸ್ಥಳೀಯ ಮೇಲ್ವಿಚಾರಕರು ಅಥವಾ ತಾಲೂಕು ಯೋಜನಾಧಿಕಾರಿಗಳಿಗೆ ಕರೆ ಮಾಡಿದರೆ ಅವರ ಮನೆ ಬಾಗಿಲಿಗೆ ವಾಹನವನ್ನು ಕಳುಹಿಸಿ ಆರೋಗ್ಯ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆ ಇದ್ದರೆ ಅಂತಹವರಿಗೆ ಊಟದ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಲು ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

 

By admin