ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶದ ಮಹಿಳೆಯರು, ಕೃಷಿಕರು, ಕೂಲಿ ಕಾರ್ಮಿಕರು ಉತ್ತಮ ಜೀವನ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಪಿ.ಗಂಗಾಧರ ರೈ ತಿಳಿಸಿದರು.

ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವರ್ಷಗಳಿಂದ ಜಿಲ್ಲೆಯಲ್ಲಿ ರಚಿಸಿದ 14,500 ಸ್ವಸಹಾಯ ಸಂಘಗಳ1.10 ಲಕ್ಷ ಸದಸ್ಯರು 50.00 ಕೋಟಿ ಹಣ ಉಳಿತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೃಷಿ, ಸ್ವ ಉದ್ಯೋಗ, ಮೂಲ ಸೌಕರ್ಯ ಅಭಿವೃದ್ಧಿ, ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಗೆ 16.60 ಕೋಟಿ ಸಾಲ ಕೊಡಿಸಲಾಗಿದೆ ಎಂದರು.

ರೈತರ ಏಳಿಗೆಗಾಗಿ ಪ್ರಗತಿಬಂಧು ತಂಡ ರಚಿಸಿ ರೈತ ಕ್ಷೇತ್ರ ಪಾಠ ಶಾಲೆ, ಕೃಷಿ ವಿಚಾರ ಸಂಕಿರಣ, ಅಧ್ಯಯನ ಪ್ರವಾಸ, ಕೃಷಿ ಉತ್ಸವ ಕಾರ್ಯಕ್ರಮ ಆಯೋಜನೆ, ಭತ್ತ ಬೇಸಾಯಕ್ಕೆ ನಾಟಿ ಮತ್ತು ಕಟಾವು ಯಂತ್ರ ಒದಗಿಸಲಾಗುತ್ತಿದೆ. ಹೈನುಗಾರಿಕಗೆ ನೀಡಿದ ಪ್ರೋತ್ಸಾಹ ಫಲವಾಗಿ 37 ಸಾವಿರ ಮಂದಿ ಸದಸ್ಯರು ಹೈನುಗಾರಿಕೆ ಅವಲಂಬಿಸಿದ್ದು, 4800 ಕೋಟಿ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ವ-ಉದ್ಯೋಗದಡಿ ಗುಡಿ ಕೈಗಾರಿಕೆ, ಅಂಗಡಿ, ಬೇಕರಿ, ವಾಹನ ಖರೀದಿಗೆ ನೆರವು ನೀಡಲಾಗಿದೆ. ಪರ್ಯಾಯ ಇಂಧನ ಬಳಕೆ ಸಲುವಾಗಿ ಸೆಲ್ಕೋ ಸೋಲಾರ್‍ನಿಂದ ಮನೆಗೆ ಬೆಳಕಲ್ಲದೇ ವಿವಿಧ ರೀತಿಯ ಸೌಲಭ್ಯಗಳನ್ನು 11 ಸಾವಿರ ಕುಟುಂಬದವರು ಬಳಸಿಕೊಂಡಿದ್ದಾರೆ. ವಿಮಾ ಸೌಲಭ್ಯದ ಕಾರಣ 196 ಸದಸ್ಯರ 10 ಕೋಟಿ ಮೊತ್ತದ ಸಾಲದ ಹಣ ಮನ್ನಾ ಮಾಡಲಾಗಿದೆ ಎಂದರು.

ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಗುಂಡ್ಲುಪೇಟೆ ತಾಲೂಕಿನ ರಂಗೂಪುರ (ಹೊರೆಯಾಲ)ಕೆರೆ, ಕೊಳ್ಳೆಗಾಲದ ಗಿರಿಶೆಟ್ಟಿ ಕೆರೆ, ಯಳಂದೂರಿನ ಗೌರಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮಂಜೂರಾತಿ ಸಿಕ್ಕಿದೆ. ಸುಜ್ಞಾನ ನಿಧಿ ಯೋಜನೆಯಡಿ 471 ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.

ಯೋಜನೆ ಜಿಲ್ಲಾ ನಿರ್ದೇಶಕರಾದ ಲೀಲಾವತಿ, ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin