ಚಾಮರಾಜನಗರ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ  ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. 
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸ್ತ್ರೀ ಸಬಲೀಕರಣ, ಸಮಾಜದ ಕೆಳಸ್ತರದ ಜನಕಲ್ಯಾಣ, ದೇವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳ ಜೀರ್ಣೊದ್ಧಾರ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ತಾವು ಕೈಗೊಂಡಿರುವ ಆದರ್ಶಪ್ರಾಯ ಕಾರ್ಯಕ್ರಮಗಳು ರಾಜ್ಯದ, ತನ್ಮೂಲಕ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಗಿವೆ. ಗ್ರಾಮೀಣಾಭಿವೃದ್ಧಿಗಾಗಿ ೮೦ರ ದಶಕದಲ್ಲೇ ತಾವು ಕಾರ್ಯಗತಗೊಳಿಸಿದ ಗ್ರಾಮೀಣಾಭಿವೃದ್ಧಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಬದುಕನ್ನು ಉಜ್ವಲಗೊಳಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವುದೇ ಅಲ್ಲದೇ ಸ್ತ್ರೀ-ಸ್ವಸಹಾಯ ಸಂಘಗಳನ್ನು ಸಂಘಟಿಸಿ ಸ್ತ್ರೀ-ಶಕ್ತಿ ಕೇಂದ್ರಗಳನ್ನಾಗಿ ಪರಿವರ್ತಿಸಿದ ಸಾಧನೆ ತಮ್ಮದು. ರಾಜ್ಯಾದ್ಯಂತ ನೂರಾರು ದೇಗುಲಗಳ ಜೀರ್ಣೋದ್ಧಾರ ಕೈಗೊಂಡು ತನ್ಮೂಲಕ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಕೀರ್ತಿ ತಮ್ಮದು.   
ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಶಾಲಾ-ಕಾಲೇಜುಗಳ ಸ್ಥಾಪನೆಯಲ್ಲದೆ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಇತ್ಯಾದಿ ಭಾರತೀಯ ವೈದ್ಯ ಪದ್ದತಿಗಳನ್ನು ಉಳಿಸುವುದಷ್ಟೆ ಅಲ್ಲದೇ ಅವುಗಳ ಬೆಳವಣಿಗೆಗೂ ಕಾರಣಕರ್ತರಾಗಿರುತ್ತೀರಿ. ಆಧುನಿಕ ತಂತ್ರಜ್ಞಾನ ಒಳಗೊಂಡ ತಾಂತ್ರಿಕ, ದಂತ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿ ತನ್ಮೂಲಕ ರಾಷ್ಟ್ರಕ್ಕೆ ಉತ್ತಮ ಕೊಡುಗೆಗಳನ್ನೂ ನೀಡಿದ್ದೀರಿ. 
ತಮ್ಮ ಇಪ್ಪತ್ತನೆಯ ಹರಯದಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಧರ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿಸಿಕೊಂಡು ತಾವು ಸಮಾಜಮುಖಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿ ಭಾರತ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ ಅಲ್ಲದೇ ಕರ್ನಾಟಕ ರತ್ನ ಪ್ರಶಸ್ತಿಗೂ ಭಾಜನರಾಗಿರುತ್ತೀರಿ. ತಾವು ಹಲವಾರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಸಹ ಪಡೆದಿರುವುದು ಆ ವಿಶ್ವವಿದ್ಯಾಲಯಗಳಿಗೆ ಸಂದ ಗೌರವವೇ ಸರಿ. ರಾಷ್ಟ್ರದ ಹಾಗೂ ಸಮಾಜ ಸೇವೆ ಬಗ್ಗೆ ಹೊಂದಿರುವ ಕಳಕಳಿಯ ಹಿನ್ನಲೆಯಲ್ಲಿ ತಮಗೆ ಸಂದಿರುವ ಈ ಅವಕಾಶದಲ್ಲಿ ತಾವು ರಾಜ್ಯಸಭೆಗೇ ಭೂಷಣರಾಗಿ ರಾಷ್ಟ್ರದ ಜನತೆಗೆ ಮಾರ್ಗದರ್ಶನ ಮಾಡುತ್ತೀರೆಂಬ ಅಚಲ ವಿಶ್ವಾಸ ನನಗಿದೆ. 
ಈ ಶುಭ ಸಂದರ್ಭದಲ್ಲಿ ನನ್ನ ಹಾಗೂ ರಾಜ್ಯದ ಜನತೆಯ ಪರವಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಪತ್ರ ಮುಖೇನ ತಿಳಿಸಿದ್ದಾರೆ.