ಚಾಮರಾಜನಗರ: ಕಾರ್ಯಾಂಗದ ಪ್ರಮುಖ ಭಾಗವಾಗಿರುವ ಅಧಿಕಾರಿ ನೌಕರರ ವರ್ಗದ ಪರಿಣಾಮಕಾರಿ ಹಾಗೂ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದ ದೇಶ, ರಾಜ್ಯದ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಸಕಾಂಗ ರೂಪಿಸುವ ಶಾಸನಗಳು, ಕಾರ್ಯಕ್ರಮಗಳು, ಯೋಜನೆಗಳನ್ನು ಅನುಷ್ಠಾನ ಮಾಡುವ ಮಹತ್ತರ ಹೊಣೆಗಾರಿಕೆ ಕಾರ್ಯಾಂಗದ ಮೇಲಿದೆ. ಸರ್ಕಾರಿ ಅಧಿಕಾರಿ ನೌಕರರು ನಿಷ್ಠೆ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದರೆ ಅಭಿವೃದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ಅಧಿಕಾರಿ ನೌಕರರದ್ದಾಗಿದೆ ಎಂದರು.
ಸುಧೀರ್ಘ ಅವಧಿಯಲ್ಲಿ ಸಾರ್ವಜನಿಕರ ಸೇವೆಗೆ ಅವಕಾಶ ಇರುವ ಸರ್ಕಾರಿ ನೌಕರರು ಕಾನೂನಿನಡಿ ಆಡಳಿತ ನಿರ್ವಹಿಸಬಲ್ಲವರಾಗಿದ್ದಾರೆ. ಎಲ್ಲಾ ಹಂತಗಳಲ್ಲಿಯೂ ಅತ್ಯಂತ ಎಚ್ಚರಿಕೆಯಿಂದ ಆಡಳಿತದ ವ್ಯವಸ್ಥೆಯ ಸುಗಮ ನಿರ್ವಹಣೆಗೆ ಬಹುಮುಖ್ಯ ಜವಾಬ್ದಾರಿ ವಹಿಸಲಿದ್ದಾರೆ. ಹೀಗಾಗಿ ಅಧಿಕಾರಿ ನೌಕರರ ಕಾರ್ಯ ಚಟುವಟಿಕೆಗಳು ಗಮನಾರ್ಹವಾಗಲಿವೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಜನಪರವಾಗಿ ಅಧಿಕಾರಿ ನೌಕರರು ಸೇವೆ ಸಲ್ಲಿಸಬೇಕು. ಹಿರಿಯ ನೌಕರರ ಮಾರ್ಗದರ್ಶನ ಪಡೆಯಬೇಕು. ಬೇರೆ ಬೇರೆ ಇಲಾಖೆಗಳು ಸಮನ್ವಯದಿಂದ ಒಂದು ತಂಡವಾಗಿ ಕೆಲಸ ಮಾಡಿದಾಗ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯಗಳು ನಡೆಯಲು ಸಾಧ್ಯವಾಗುತ್ತದೆ ಎಂದರು.
ಕರ್ತವ್ಯ ನಿರ್ವಹಣೆ ವೇಳೆ ತಪ್ಪುಗಳಾಗುವುದು ಸಹಜ. ಆದರೆ ಸರಿಪಡಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಸೇವೆಗಾಗಿ ಇರುವ ಅಧಿಕಾರಿ ಸಿಬ್ಬಂದಿ ಸ್ವತಃ ಪ್ರೇರಣೆಯಿಂದ ಕರ್ತವ್ಯ ಸಲ್ಲಿಸಬೇಕು. ಸಾರ್ವಜನಿಕರ ಇಲಾಖೆಗಳ ನಡುವಿನ ಅಂತರವನ್ನು ಹೋಗಲಾಡಿಸಿ ಜನರ ಒಳಿತಿಗೆ ಜಿಲ್ಲೆಯ ಅಭಿವೃದ್ದಿಗೆ ಸೇವೆ ಸಲ್ಲಿಸಬೇಕೆಂಬ ಮನೋಭಾವನೆ ರೂಢಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಲಹೆ ಮಾಡಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಯಾವುದೇ ಹುದ್ದೆಯಲ್ಲಿರಲಿ ಜನರ ಸೇವೆ ಮಾಡಲು ಸರ್ಕಾರಿ ನೌಕರರಿಗೆ ಅವಕಾಶವಿದೆ. ಕಾಯಕವೇ ಕೈಲಾಸವೆಂದು ತಿಳಿದು ಬಡವರ ಕೆಲಸವನ್ನು ಮಾಡಿಕೊಟ್ಟರೆ ಶಾಶ್ವತವಾಗಿ ಅಧಿಕಾರಿ ನೌಕರರ ಹೆಸರು ಮನಸ್ಸಿನಲ್ಲಿ ಉಳಿಯಲಿದೆ. ಹೀಗಾಗಿ ಸ್ಪಂದನಾ ಶೀಲರಾಗಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ಸರ್ಕಾರಿ ಅಧಿಕಾರಿ ನೌಕರರು ನಿಷ್ಪಕ್ಷಪಾತವಾಗಿ ಇರಬೇಕು. ಕೆಲಸ ಕಾರ್ಯಗಳಿಗೆ ಬರುವ ವ್ಯಕ್ತಿಯ ಹಿನ್ನೆಲೆ ನೋಡದೇ ಸೇವಾ ಮನೋಭಾವನೆ ಯಿಂದ ಕಾರ್ಯನಿರ್ವಹಿಸಬೇಕು. ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು. ಉದಾಸೀನ ತೋರದೆ ನಿಗದಿತ ಅವಧಿಯೊಳಗೆ ಸಾರ್ವಜನಿಕರ ಕಾರ್ಯವಾದರೆ ಅಧಿಕಾರಿ ನೌಕರರ ಗೌರವ ಹೆಚ್ಚಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಸರ್ಕಾರಿ ಅಧಿಕಾರಿ ನೌಕರರಿಗೆ ಸರ್ಕಾರದ ಆದೇಶ, ಸುತ್ತೋಲೆ, ಕಾಯ್ದೆ, ನಿಯಮಗಳ ಅರಿವು ಇರಬೇಕು. ಇದರಿಂದ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಬಹುದು. ಸಾರ್ವಜನಿಕರ ಕೆಲಸವನ್ನು ಮಾಡಲು ವಿಳಂಬ ಮಾಡಿದರೆ ಒತ್ತಡ ಅನುಭವಿಸಬೇಕಾಗುತ್ತದೆ. ಹೀಗಾಗಿ ಸೂಚಿತ ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಜ್ಞಾನವೇ ಶಕ್ತಿ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ದಕ್ಷತೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಸ್ಪಂದಿಸಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ಮಾತನಾಡಿ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಇಲಾಖೆಗಳ ಅಧಿಕಾರಿ ನೌಕರರು ಶ್ರಮ ವಹಿಸಿದ್ದಾರೆ. ಇದೇ ಪ್ರಥಮ ಬಾರಿಗೆ ಸರ್ಕಾರಿ ನೌಕರರ ದಿನ ಆಚರಣೆ ಮಾಡಲಾಗುತ್ತಿದೆ. ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲೆಡೆ ಸರ್ಕಾರಿ ನೌಕರರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ನೌಕರರ ಸಂಘದ ಹೋರಾಟದಿಂದ ಹಲವು ಸೌಲಭ್ಯಗಳು ನೌಕರರಿಗೆ ಲಭಿಸುತ್ತಿವೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಯಟ್ ಹಿರಿಯ ಉಪನ್ಯಾಸಕರಾದ ಯು.ಆರ್. ಲಿಂಗರಾಜೇಅರಸ್ ಅವರು ಮಾತನಾಡಿ ಸರ್ಕಾರಿ ಅಧಿಕಾರಿ ನೌಕರರು ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸೌಜನ್ಯ, ವಿನಯ, ಸಂವೇದನಾ ಶೀಲತೆ ಇರಬೇಕಾಗುತ್ತದೆ. ಸ್ವಯಂ ಶಿಸ್ತು, ಸಮಯ ಪಾಲನೆ ರೂಢಿಸಿಕೊಳ್ಳಬೇಕು. ತಂತ್ರಜ್ಞಾನದ ಬಗ್ಗೆಯೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಗುಂಡ್ಲುಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಯ ದಂತ ವೈದ್ಯಾಧಿಕಾರಿ ಡಾ. ಜೆ.ಡಿ. ಸ್ಮಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾಸ್ಪತ್ರೆಯ ಹಿರಿಯ ವಾಹನ ಚಾಲಕರಾದ ಎಸ್. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಹೆಚ್.ಎಸ್. ಗಂಗಾಧರ್, ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಉಮಾರಾಣಿ, ಸಿಮ್ಸ್ ಆಸ್ಪತ್ರೆಯ ತುರ್ತು ಔಷಧ ವೈದ್ಯಾಧಿಕಾರಿ ಡಾ. ಕೆ.ಬಿ. ಅಭಿಷೇಕ್, ಚಾಮರಾಜನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಶಿವಕುಮಾರ್, ಹನೂರು ತಾಲೂಕು ರಾಮಾಪುರ ಹೋಬಳಿಯ ಉಪ ತಹಶೀಲ್ದಾರ್ ಜಿ.ಎಂ. ಸುರೇಖ, ಚಾಮರಾಜನಗರ ತಾಲೂಕು ಯಡಿಯೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿ ಸುಮಂತ್‌ಕುಮಾರ್ ಹಾಗೂ ಹನೂರು ತಾಲೂಕು ಬಂಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನವೀತ ತೇಜೆಗೌಡ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಹಾಗೂ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಹೆಚ್.ಎಸ್. ಗಂಗಾಧರ್ ಅವರು ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಹೆಚ್.ಎಸ್. ಗಂಗಾಧರ್ ಅವರು ಮಾತನಾಡಿ ಪ್ರಶಸ್ತಿ ಪುರಸ್ಕಾರದೊಂದಿಗೆ ತಮಗೆ ನೀಡಲಾಗಿರುವ ೨೫ ಸಾವಿರ ರೂ. ನಗದನ್ನು ಬಡ ವಿದ್ಯಾರ್ಥಿಗಳ ನೆರವಿಗೆ ಹಾಗೂ ಸರ್ಕಾರಿ ನೌಕರರ ಸಂಘದ ಚಟುವಟಿಕೆಗಳಿಗೆ ನೀಡುವುದಾಗಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಎಸ್. ಮಹದೇವಸ್ವಾಮಿ, ಎಸ್. ಮಹಾದೇವಯ್ಯ, ಮಲ್ಲಿಕಾರ್ಜುನ್ ಕುಂಟೋಜಿ, ಜೋಸೆಫ್ ಅಲೆಕ್ಸಾಂಡರ್, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.