
ಚಾಮರಾಜನಗರ: ಸೇವೆಗಾಗಿ ಬಾಳು ಎಂಬ ಸಂಕಲ್ಪದಡಿ ಶಿಕ್ಷಕರಿಗೆ ಮೂರು ದಿನಗಳ ಸೇವಾದಳ ಕಾರ್ಯಾಗಾರ ಹಮ್ಮಿಕೊಂಡಿರುವುದು ಅರ್ತಪೂರ್ಣವಾಗಿದ್ದು ದೇಶಭಕ್ತಿ, ರಾಷ್ಟ್ರೀಯತೆ, ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು, ನಿಸ್ವಾರ್ಥ ಗುಣಗಳನ್ನು ಒಳಗೊಂಡ ಮೌಲ್ಯಾಧಾರಿತ ಕಾರ್ಯಾಗಾರವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಇಂದು ತರಬೇತಿ ನೀಡಲಾಗುತ್ತಿದೆ ಎಂದು ಸೇವಾದಳದ ತಾಲ್ಲೂಕು ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ತಿಳಿಸಿದರು.
ಅವರು ನಗರದ ಡಯಟ್ ಸಂಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಕ್ಷಕರಿಗೆ ಮೂರು ದಿನದ ಜಿಲ್ಲಾ ಮಟ್ಟದ ಸೇವಾದಳ ತರಬೇತಿ ಕಾರ್ಯಾಗಾರ ಹಾಗೂ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ನಾ.ಸು.ಹರ್ಡೀಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶಿಕ್ಷಕರು ಇಲ್ಲಿ ಪಡೆದ ಉತ್ತಮ ಜ್ಙಾನವನ್ನು ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸಿ ಅವರಲ್ಲಿ ದೇಶಪ್ರೇಮ, ಗಾಂಧೀಜಿ ಹಾಕಿಕೊಟ್ಟ ಸ್ವಾತಂತ್ರ್ಯ ಚಳುವಳಿ ಮಾರ್ಗದ ಗುರಿಗಳು, ಹರ್ಡೀಕರ್ ಅವರ ಧ್ಯೇಯೋದ್ದೇಶಗಳು ಸೇವಾದಳದಲ್ಲಿ ಅಡಕವಾಗಿದೆ. ಇದನ್ನು ಕಾರ್ಯಗತ ಮಾಡುವುದು ಶಿಕ್ಷಕರ ಜವಾಬ್ದಾರಿ ಎಂದರು.
ಮೌಲ್ಯಗಳು ಅಧಃಪತನವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತಿನಂತ ಗುಣಗಳು ಅಗತ್ಯವಾಗಿದೆ.ಎಲ್ಲಕ್ಕಿಂತ ಜ್ಙಾನ ದೊಡ್ಡದು ಹೀಗಾಗಿ ಉತ್ತಮ ಜ್ಙಾನವಂತ ಸಮಾಜ ನಿರ್ಮಿಸುವತ್ತ ಶಿಕ್ಷಕ ವರ್ಗ ಗಮನಹರಿಸಬೇಕು ಅದಕ್ಕೆ ಬೇಕಾದ ಗುಣಗಳನ್ನು ಸೇವಾದಳ ಬೆಳೆಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕೊರೊನಾ ಜಾಗೃತಿ ಮೂಡಿಸಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಹದೇವಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಪದ ಅಧ್ಯಕ್ಷೆ ಅನ್ನಪೂರ್ಣಮ್ಮ, ಕಾರ್ಯದಶಿ ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಚಿಕ್ಕಬಸವಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಶೇಷಚಲ, ಜ್ಯೋತಿ,ಜಿಲ್ಲಾ ಸಂಘಟಕ ಈರಯ್ಯ, ಪ್ರೌಢಶಾಲ ತಾಲ್ಲೂಕು ಅಧ್ಯಕ್ಷ ತಗಡೂರಯ್ಯ, ರಾಜ್ಯ ಉಪಾಧ್ಯಕ್ಷ ಜೋಸೆಫ್, ತಾಲ್ಲೂಕು ಸೇವಾದಳದ ಸಮಿತಿಯ ಅಧ್ಯಕ್ಷ ನರಸಿಂಹ, ಸದಸ್ಯ ಬಂಗಾರಗಿರಿ ನಾಯ್ಕ ಸೇರಿದಂತೆ ಸೇವಾದಳದ ಸಂಪನ್ಮೂಲ ವ್ಯಕ್ತಿಗಳು,ಶಿಕ್ಷಕರು ಭಾಗವಹಿಸಿದ್ದರು.
