ಚಾಮರಾಜನಗರ: ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನತೆಯ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಲಾಗುವುದೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಹಾಜರಿದ್ದ ಮುಖಂಡರು ಜೀತ ವಿಮುಕ್ತರಿಗೆ ಸಿಗಬೇಕಾದ ಸೌಲಭ್ಯ, ಪರಿಶಿಷ್ಟರಿಗೆ ಸಾಗುವಳಿ ಚೀಟಿ, ಆರ್.ಟಿ.ಸಿ, ಸ್ಮಶಾನದ ಸಮಸ್ಯೆ, ಒತ್ತುವರಿ ತೆರವು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ನಿರ್ಮಿತಿ ಕೇಂದ್ರ, ಕೆ.ಆರ್.ಐಡಿಎಲ್ ಏಜೆನ್ಸಿಗಳಿಂದ ನೀಡುವ ಕಾಮಗಾರಿಯಲ್ಲಿ ೫೦ ಲಕ್ಷ ಒಳಪಟ್ಟ ಕಾಮಗಾರಿಯನ್ನು ನೀಡುವ ಬಗ್ಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿಶೇಷ ಅನುದಾನ ದುರುಪಯೋಗ ಸಂಬಂಧ ವಿವರವಾಗಿ ಸಭೆಯ ಗಮನಕ್ಕೆ ತಂದರು.
ರಾಷ್ಟ್ರೀಯ ಹೆದ್ದಾರಿಗೆ ಜಮೀನು ಬಿಟ್ಟುಕೊಟ್ಟವರಿಗೆ ಪರಿಹಾರ ಸಮರ್ಪಕವಾಗಿ ನೀಡದಿರುವ ಕುರಿತು, ಚಾಮರಾಜನಗರ ಪಟ್ಟಣದಲ್ಲಿ ಹೆದ್ದಾರಿ ಅಗಲೀಕರಣದಿಂದ ಮನೆ ಕಳೆದುಕೊಂಡವರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸದಿರುವುದು, ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳು, ದೌರ್ಜನ್ಯ ಪ್ರಕರಣಗಳು, ನಿಗಮಗಳಿಂದ ಶೀಘ್ರ ಸಾಲ ಸೌಲಭ್ಯ ಸಿಗದಿರುವುದು, ಸಂತೇಮರಹಳ್ಳಿ ಜೋಡಿಕೊಲೆ ಪ್ರಕರಣದಲ್ಲಿ ಸಂತ್ರಸ್ತರೋರ್ವರ ಕುಟುಂಬಕ್ಕೆ ಇನ್ನೂ ಸರ್ಕಾರಿ ನೌಕರಿ ಸಿಗದೇ ಇರುವುದು, ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಒದಗಿಸುವುದು, ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆ ಸೇರಿದಂತೆ ವಿವಿಧ ಭಾಗಗಳ ಸಮಸ್ಯೆಗಳನ್ನು ಸುಧೀರ್ಘವಾಗಿ ಮುಖಂಡರು ಸಭೆಯಲ್ಲಿ ವಿವರಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು ನಿಯಮಾನುಸಾರ ಕಾಲಮಿತಿಯೊಳಗೆ ನಡೆಸಬೇಕು. ವಿಳಂಬ ಮಾಡಬಾರದು. ಸಭೆಯಲ್ಲಿ ಚರ್ಚೆಯಾಗುವ ವಿಷಯಗಳಿಗೆ ಶೀಘ್ರ ಪರಿಹಾರ ದೊರೆಯಬೇಕು ಎಂದು ಮುಖಂಡರು ತಿಳಿಸಿದರು.
ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆ, ಕುಂದು ಕೊರತೆ ವಿಷಯಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದಿಷ್ಟ ಅವಧಿಯೊಳಗೆ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೀತ ವಿಮುಕ್ತರ ಸಮಸ್ಯೆಗಳ ಸಂಬಂಧ ಸಭೆ ನಡೆಸಿ ವಿವರವಾದ ವರದಿ ಸಲ್ಲಿಸಬೇಕು. ಸಾಗುವಳಿ, ಆರ್ಟಿಸಿ ಸೇರಿದಂತೆ ಪರಿಶಿಷ್ಟರಿಗೆ ಭೂಮಿ ನೀಡುವ ವಿಚಾರದಲ್ಲಿ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು. ಜೀತ ವಿಮುಕ್ತರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲಾಗುತ್ತಿದೆ. ಸ್ಮಶಾನಗಳ ಸಮಸ್ಯೆ ಸಂಬಂಧ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ಸಭೆಯಲ್ಲಿ ಚರ್ಚಿಸಲಾಗಿರುವ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಮುಖಂಡರಾದ ಸಿ.ಕೆ. ಮಂಜುನಾಥ್, ಬಿ. ಜಯಸುಂದರ, ಸಿ. ಧರಣೇಂದ್ರ, ಸಿದ್ದರಾಜು ಕೆಂಪನಪಾಳ್ಯ, ಸಿ.ಎಂ. ಕೃಷ್ಣಮೂರ್ತಿ, ದೊಡ್ಡಿಂದುವಾಡಿ ಸಿದ್ದರಾಜು, ವಿ. ಪ್ರಕಾಶ್, ಆರ್. ನಾರಾಯಣ, ಚಾ.ಗು. ನಾಗರಾಜು, ಸಿ.ಕೆ. ರವಿಕುಮಾರ್, ಕದಂಬ ಅಂಬರೀಶ್, ಅಣಗಳ್ಳಿ ಬಸವರಾಜು, ಚಾ.ಸಿ. ಸೋಮನಾಯಕ, ಬ್ಯಾಡಮೂಡ್ಲು ಬಸವಣ್ಣ, ಜಿ. ಬಂಗಾರು, ಕುಣಗಳ್ಳಿ ರಂಗಸ್ವಾಮಿ, ಮಲ್ಲೇಶ್, ಸಿ.ಎಂ. ಶಿವಣ್ಣ, ರಾಜು, ಪಿ. ಸಂಘಸೇನ, ಕಂದಹಳ್ಳಿ ನಾರಾಯಣ, ಆಲೂರು ನಾಗೇಂದ್ರ, ಮುತ್ತಿಗೆ ಮೂರ್ತಿ, ರಾಮಸಮುದ್ರ ಸುರೇಶ್, ಪರ್ವತರಾಜು, ಬಸವನಪುರ ರಾಜಶೇಖರ್, ಮರಪ್ಪ, ಯರಿಯೂರು ರಾಜಣ್ಣ, ದಲಿತ್ ರಾಜು, ಬಸವರಾಜು ರಾಮಸಮುದ್ರ, ಎಸ್. ರಾಮಚಂದ್ರ, ವೈ.ಡಿ. ಸೂರ್ಯನಾರಾಯಣ, ಎಂ. ರಮೇಶ್, ಭೀಮಪ್ಪ, ಶ್ರೀನಿವಾಸಮೂರ್ತಿ, ಬಿ.ಎಂ. ರಾಜು, ಮಹೇಶ್, ಪ್ರದೀಪ್, ನಟರಾಜು ಹೊಂಗನೂರು, ನಾಗೇಶ್, ಎಂ.ಎಸ್. ಹರೀಶ್ ಕುಮಾರ್, ವರದರಾಜು, ಎನ್. ಸಾಗರ್, ಎಂ. ಸೋಮಣ್ಣ, ಸುನೀಲ್ರಾಜ್, ಸುರೇಶ್ ಇತರೆ ಮುಖಂಡರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.