ಚಾಮರಾಜನಗರ:ಗ್ರಾಮ ಮಟ್ಟದಲ್ಲಿ ಸರ್ಕಾರ, ಬ್ಯಾಂಕಿಂಗ್ ಸೇವೆಗಳು ಆರ್.ಟಿ.ಐ ಸೇರಿದಂತೆ ಇನ್ನಿತರ ಸೇವೆಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಮಹತ್ವಾಕಾಂಕ್ಷಿ ಗ್ರಾಮ ಒನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಪ್ರತಿ ಪ್ರಜೆಗೂ ತಲುಪಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮ ಒನ್ ಯೋಜನೆಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಒನ್ ಕೇಂದ್ರಗಳು ನಾಗರಿಕರಿಗೆ ವಿವಿಧ ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಸೌಲಭ್ಯ ಪಡೆಯಲು ಸಹಾಯ ಸೇವಾ ವಿತರಣಾ ಮಾರ್ಗವಾಗಿದೆ. ಈ ಕೇಂದ್ರದ ನಿರ್ವಹಣೆ ಮಾಡುವವರಿಗೆ ಮಹತ್ತರ ಹೊಣೆಗಾರಿಕೆ ಇದೆ. ಯೋಜನೆಯ ಅನುಷ್ಠಾನ, ಮೇಲ್ವಿಚಾರಣೆ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಚಾಮರಾಜನಗರ ಗಡಿ ಜಿಲ್ಲೆಯಾಗಿದ್ದು, ಅರಣ್ಯ ಪ್ರದೇಶವು ಸಹ ಹೆಚ್ಚಿದೆ. ಕಾಡಂಚಿನ ಗ್ರಾಮದ ಜನರು ಸರ್ಕಾರದ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ಪಟ್ಟಣಕ್ಕೆ ಬರಲು ಸಾರಿಗೆ ವ್ಯವಸ್ಥೆಯ ತೊಂದರೆಯಿದೆ. ಹೀಗಾಗಿ ಆಯಾ ಗ್ರಾಮಗಳಲ್ಲೇ ಸೌಲಭ್ಯ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮ ಒನ್ ಕೇಂದ್ರವೂ ಸಮರ್ಪಕವಾಗಿ ನಿರ್ವಹಣೆಯಾಗಬೇಕಿದೆ. ಸಾರ್ವಜನಿಕರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಬೇಕಿದೆ ಎಂದರು.
ಗ್ರಾಮ ಒನ್ ಕೇಂದ್ರದಲ್ಲಿ ಕೆಲಸ ಮಾಡುವ ನಿರ್ವಾಹಕರು ಸಾರ್ವಜನಿಕರೊಡನೆ ಸ್ನೇಹ ಮನೋಭಾವನೆಯಿಂದ ವರ್ತಿಸಬೇಕು. ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಮನೆ ಮನೆಗೆ ತೆರಳಿ ಗ್ರಾಮ ಒನ್ ಸೇವಾ ಸೌಲಭ್ಯದ ಪ್ರಯೋಜನ ಪಡೆಯಲು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಸೇವಾ ಸಿಂಧು ಯೋಜನಾ ನಿರ್ದೇಶಕರಾದ ಬಿ.ಎನ್. ವರಪ್ರಸಾದ್ ರೆಡ್ಡಿ ಅವರು ಮಾತನಾಡಿ, ಗ್ರಾಮ ಒನ್ ಯೋಜನೆಯು ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಾಗಿದೆ. ಗ್ರಾಮ ಒನ್ ಕೇಂದ್ರದಿಂದ ನಿರುದ್ಯೋಗಿ ಯುವಕ ಯುವತಿಯರಿಗೂ ಉದ್ಯೋಗಾವಕಾಶ ದೊರಕಿದಂತಾಗಿದೆ. ಸರ್ಕಾರದ ಯೋಜನೆಯನ್ನು ಗ್ರಾಮದ ಮನೆ ಮನೆಗೂ ತಲುಪಿಸುವಲ್ಲಿ ಮುಂದಾದರೆ ಯಶಸ್ಸು ಸಿಗಲಿದೆ ಎಂದರು.
ಗ್ರಾಮ ಒನ್ ಕೇಂದ್ರವನ್ನು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ತೆರೆದಿರಬೇಕು. ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್, ಬಯೋಮೆಟ್ರಿಕ್ ದೃಢೀಕರಣ ಸಾಧನ, ಇಂಟರ್ ನೆಟ್ ಸಂಪರ್ಕ, ವಿದ್ಯುತ್ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಬ್ರ್ಯಾಂಡಿಂಗ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸೇವೆಗಳ ಬಳಕೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತರಬೇತಿ ಪಡೆಯಬೇಕು ಎಂದು ವರಪ್ರಸಾದ್ ರೆಡ್ಡಿ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿಯಾವರಾದ ಎಸ್. ಕಾತ್ಯಾಯಿನಿದೇವಿ, ಸೇವಾ ಸಿಂಧು ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ನಂಜುಂಡಸ್ವಾಮಿ, ಜಿಲ್ಲಾ ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಗಂಗಾಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.