ಚಾಮರಾಜನಗರ: ಜಿಲ್ಲೆಯಲ್ಲಿ ಮಳೆ, ಪ್ರವಾಹ ಇನ್ನಿತರ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ತಲುಪಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ, ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಸಂಭವಿಸಿದ ಪ್ರವಾಹ, ಅತಿವೃಷ್ಠಿ, ಪ್ರಕೃತಿ ವಿಕೋಪ ಕಾರಣಗಳಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ ಬೆಳೆಯ ಪ್ರಮಾಣವನ್ನು ಲೆಕ್ಕಾಚಾರ ಮಾಡುವ ಬಾಕಿ ಸಮೀಕ್ಷೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ರೈತರು, ಬೆಳೆಗಾರರಿಗೆ ಬೆಳೆಹಾನಿ ಪರಿಹಾರವನ್ನು ತ್ವರಿತವಾಗಿ ನೀಡಲು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಆಗಸ್ಟ್ ತಿಂಗಳಿನಲ್ಲಿಯೂ ಮಳೆ ಬೀಳುವುದು ಈ ಹಿಂದಿನಿಂದಲೂ ಸಾಮಾನ್ಯವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಮುಂದುವರೆಸಬೇಕು. ಮಳೆ, ಪ್ರವಾಹದಂತಹ ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿರಬೇಕು. ನೋಡಲ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಮಳೆಯಿಂದ ಶಾಲೆ, ಅಂಗನವಾಡಿ ಕಟ್ಟಡಗಳು ಶಿಥಿಲವಾಗಿದ್ದಲ್ಲಿ ಅದರ ದುರಸ್ಥಿಗೂ ಆದ್ಯತೆ ನೀಡಬೇಕು. ಎಷ್ಟು ಕಟ್ಟಡಗಳು ಮಳೆಯಿಂದ ಹಾನಿಗೀಡಾಗಿವೆ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವರದಿ ಸಿದ್ದಪಡಿಸಬೇಕು. ರೈತರಿಗೆ ನೆರವಾಗುವ ಬೆಳೆ ವಿಮೆ ಪ್ರಯೋಜನ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು. ಹೆಚ್ಚು ರೈತರಿಗೆ ಬೆಳೆ ವಿಮೆಗೆ ನೊಂದಾಯಿಸಲು ಉತ್ತೇಜಿಸಬೇಕು. ಇದರಿಂದ ಸಂಕಷ್ಟ ಕಾಲದಲ್ಲಿ ನೆರವಾಗಲು ಸಾಧ್ಯವಾಗುತ್ತದೆ. ಬೆಳೆ ವಿಮೆ ಪರಿಹಾರಗಳು ಸರಿಯಾದ ಸಮಯದಲ್ಲಿ ರೈತರಿಗೆ ಸಿಗುವಂತಾಗಲು ಅಧಿಕಾರಿಗಳು ನಿಗಾವಹಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಯವರು ಸೂಚಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ರಸಗೊಬ್ಬರಗಳಿಗೆ ಕೊರತೆಯಾಗಬಾರದು. ಹನೂರು, ಕೊಳ್ಳೇಗಾಲ ಭಾಗದಲ್ಲಿ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗದಿರುವ ಬಗ್ಗೆ ದೂರು ಕೇಳಿಬಂದಿದೆ. ಯಾವುದೇ ಕಾರಣಕ್ಕೂ ರಸಗೊಬ್ಬರ ವಿತರಣೆಯಲ್ಲಿ ಲೋಪವಾಗುವುದು ಬೇಡ. ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಲಭ್ಯವಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಬಂಧ ವಿವರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರು ಇತ್ತೀಚೆಗೆ ಕೋವಿಡ್ ಸೋಂಕು ಧೃಡ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸೋಂಕು ವ್ಯಾಪಿಸದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳಿಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಕೋವಿಡ್ ತಡೆಯುವಲ್ಲಿ ಪ್ರಮುಖವಾಗಿರುವ ಲಸಿಕೆ ನೀಡುವ ಕಾರ್ಯ ವೇಗವಾಗಿ ಕೈಗೊಳ್ಳಬೇಕು. ಬೂಸ್ಟರ್ ಡೋಸ್ ಲಸಿಕೆ ಪ್ರಗತಿ ಹೆಚ್ಚಳವಾಗಬೇಕು. ವಿದ್ಯಾರ್ಥಿಗಳು ಲಸಿಕೆಯಿಂದ ವಂಚಿತರಾಗಬಾರದು. ಶಾಲಾ ಕಾಲೇಜಿನಿಂದ ಹೊರಗುಳಿದ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ ನಡೆದಿದೆ. ಬಾಕಿ ಉಳಿದಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಲಸಿಕೆ ನೀಡುವ ಕಾರ್ಯದಲ್ಲಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಪ್ರಮುಖ ವಿಷಯಗಳ ಕುರಿತು ವಿವರವಾಗಿ ಪರಿಶೀಲಿಸಲಾಯಿತು.
ಉಪವಿಭಾಗಾಧಿಕಾರಿ ಗೀತಾ ಹುಡೇದ, ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕರಾದ ಡಾ. ಸಂಜೀವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ನೋಡಲ್ ಅಧಿಕಾರಿ ಡಾ. ಮಹೇಶ್, ಕೃಷಿ ಜಂಟಿ ನಿರ್ದೇಶಕರಾದ ಮಧುಸೂದನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ತಹಶೀಲ್ದಾರರಾದ ರವಿಶಂಕರ್, ಆನಂದಪ್ಪ, ಆನಂದಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ, ಇನ್ನಿತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
