ಚಾಮರಾಜನಗರ: ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಅವರು ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಸಮಸ್ಯೆಗಳನ್ನು ಆಲಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಪೌರಕಾರ್ಮಿಕರ ಸಮಸ್ಯೆಗಳನ್ನು ವಿವರವಾಗಿ ಆಲಿಸಿ ಚರ್ಚಿಸಿದರು.
ಪೌರಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನ ನಡೆಸಲು ಅವರ ಸಂಬಳವನ್ನೇ ನಂಬಿದ್ದಾರೆ. ಆದ್ದರಿಂದ ಸರಿಯಾದ ಸಮಯಕ್ಕೆ ಸಂಬಳ ನೀಡದಿದ್ದರೇ ಅವರು ಬಡ್ಡಿ ಸಾಲದ ಮೊರೆ ಹೋಗಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದೇ ಸರಿಯಾದ ಸಮಯಕ್ಕೆ ವೇತನ ಪಾವತಿಸಿ ಎಂದು ಅಧ್ಯಕ್ಷರು ಸೂಚಿಸಿದರು.
ಜಿಲ್ಲೆಯಲ್ಲಿನ ಎಲ್ಲಾ ಪೌರಕಾರ್ಮಿಕರಿಗೂ ಸಂಬಳದ ಜೊತೆ ವೇತನದ ಚೀಟಿಯನ್ನು ಸಹ ನೀಡಬೇಕು. ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು, ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದವರ ಕುಟಂಬಕ್ಕೆ ಹಣ ಪಾವತಿಯಾಗಬೇಕು, ೩ ತಿಂಗಳಿಗೊಮ್ಮೆ ಪೌರಕಾರ್ಮಿಕರ ಸಮಗ್ರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪೌರಕಾರ್ಮಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮ ಗಮನಕ್ಕೆ ತರಬಹುದು. ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಇರುವುದು ನಿಮ್ಮ ಕಷ್ಟಗಳನ್ನು ಬಗೆಹರಿಸುವುದಕ್ಕೆ ಎಂದು ಶಿವಣ್ಣ ಅವರು ತಿಳಿಸಿದರು.
ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋಧನಾ ಅಧಿಕಾರಿ ಸುವರ್ಣ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಭಾಗ್ಯ, ಪುಷ್ಪಲತ, ಇತರರು ಉಪಸ್ಥಿತರಿದ್ದರು.