
ಈಗಾಗಲೇ ಅಲ್ಲಲ್ಲಿ ಈಜಲು ಹೋದ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದರೊಂದಿಗೆ ದುರಂತಗಳು ನಡೆಯದಂತೆ ಗಮನಹರಿಸುವುದು ಅಗತ್ಯವಿದೆ..
ಬಹಳಷ್ಟು ಮಕ್ಕಳು ಮನೆಯಲ್ಲಿ ಪೋಷಕರಿಗೆ ಮಾಹಿತಿ ನೀಡದೆ ಗೆಳೆಯರೊಂದಿಗೆ ದೂರದ ನಾಲೆ, ನದಿಗಳಿಗೆ ಹೋಗುತ್ತಿದ್ದು, ಅಲ್ಲಿ ಈಜಾಡುವ ವೇಳೆ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಒಂದೆಡೆ ಕೊರೋನಾವೂ ಅಬ್ಬರಿಸುತ್ತಿದೆ. ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದರೂ ಇದನ್ನು ಬದಿಗೊತ್ತಿ ಗುಂಪು ಗುಂಪಾಗಿ ಈಜುವ ದೃಶ್ಯಗಳು ಕೆಲವೆಡೆ ಕಂಡು ಬರುತ್ತಿದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ತಲೆ ನಾಲೆಯ ಬದಿಗೆ ಬಡಿದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಂಬಂಧಿಸಿದವರು ಗಮನಹರಿಸಿ ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.