ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ವೀರ್ಯದ ಸೃಷ್ಟಿಗೆ ಮತ್ತು ಅದರ ದೈಹಿಕ ರೂಪಕ್ಕೆ ಕಾರಣನಾದವನು ಅಪ್ಪನೆನಿಸಲಾರ.ಆತನು ಪಿಂಡ ಕತೃಕಾರಕನಾಗಿ ನಾಮಮಾತ್ರ ಗುರುತನ್ನು ಪಡೆಯುತ್ತಾನಷ್ಟೇ.ಈವರೆಗಿನ ಆತನ ವ್ಯಕ್ತಿತ್ವಗಳೆಲ್ಲವೂ ಬದಲಾಗುವ ಹಂತಕ್ಕೆ ತಲುಪಿ ಅಪ್ಪ ಎನ್ನುವ ಪದವಿಯನ್ನು ಪೂರ್ಣಗೊಳಿಸುವುದಕ್ಕಾಗಿ ಕಲಿಯುವ ನಿರಂತರ ಬದುಕಿನ ಅಧ್ಯಾಯಗಳೇ ಆಗಿದೆ.ಮಕ್ಕಳೇ ಆತನಿಗೆ ಮಾಗುವುದಕ್ಕೆ ಅನುವು ಮಾಡಿಕೊಡಲು ಇರುವ ಬದುಕಿನ ವಿವಿಧ ಘಟ್ಟಗಳು ಮತ್ತು ಅಧ್ಯಾಯಗಳು.ಅಪ್ಪನಾಗಲು ಬಂದವನೂ ಸಹ ಅವನ ಅಪ್ಪನಿಗೆ ಬದುಕಿನ ಘಟ್ಟಗಳಲ್ಲಿ ಗೆಲ್ಲಲು ಅಧ್ಯಾಯಗಳ ರೂಪದಲ್ಲಿ ಅವಕಾಶ ಕೊಟ್ಟು ಬಂದಿರುತ್ತಾನೆ.
ಆದರೆ ಅವನ ಅಪ್ಪ ಹೇಗೆ ಪರಿಪೂರ್ಣನಾದನೋ ಎಂಬುವುದು ಈತನು ಅಪ್ಪನಾಗಲು ಬಂದಾಗ ತಿಳಿಯುತ್ತದೆ.ಎಲ್ಲಾ ಮಕ್ಕಳು ಒಂದೇ ತೆರನಾದ ಅಧ್ಯಾಯಗಳನ್ನು ಪಡೆದಿರುವುದಿಲ್ಲ.ಕೆಲವು ಮಕ್ಕಳು ಕಠಿಣ ನಡಾವಳಿಗಳ ಸ್ವರೂಪದ ಅಧ್ಯಾಯಗಳಲ್ಲಿ ದೊರೆತಿರುತ್ತಾರೆ ಹಾಗೆಯೇ ಕೆಲವು ಮಕ್ಕಳು ಸುಲಭ ನಡಾವಳಿಗಳ ಲಕ್ಷಣಗಳ ಅಧ್ಯಾಯಗಳಾಗಿ ದೊರೆತಿರುತ್ತಾರೆ.ಏನೇ ಆಗಿ ದೊರೆತರು ಆದರ್ಶ ತಂದೆ ಎನಿಸಲು ಇವುಗಳು ಮುಖ್ಯವೇ.ಮಕ್ಕಳಾದವರು ಬಾಲ್ಯಾವಸ್ಥೆ, ಹದಿಹರೆಯದ ಘಟ್ಟ, ಯವ್ವನಾವಸ್ಥೆ, ಮಧ್ಯವಯಸ್ಕ.ಹೀಗೆ ಈ ಪ್ರಮುಖ ನಾಲ್ಕು ಹಂತಗಳಲ್ಲಿ ಮಕ್ಕಳು ತಂದೆಗೆ ಅಧ್ಯಾಯಗಳಾಗಿ ಕಲಿಯಲು ಸಿಗುತ್ತಾರೆ.ತಂದೆ ಎನಿಸಿಕೊಳ್ಳುವವನು ಈ ನಾಲ್ಕು ಘಟ್ಟಗಳಲ್ಲಿನ ಮಕ್ಕಳನ್ನು ಹೇಗೆ ಕಲಿತು ಉನ್ನತೀಗೊಳ್ಳುತ್ತಾನೋ ಎನ್ನುವುದರಲ್ಲೇ ಆದರ್ಶ ತಂದೆಯ ಪಾತ್ರ ಅಡಗಿರುತ್ತದೆ.
ತಂದೆಯಾಗುವವನು ಮೊದಲು ತಾನು ಕೂಡ ಮಕ್ಕಳಿಗೆ ಅನುಗುಣವಾಗಿ ಬಾಲ್ಯಾವಸ್ಥೆಗೆ ಜಿಗಿಯಬೇಕು ಜೊತೆ ಜೊತೆಗೆ ತನ್ನ ವಯಸ್ಸಿನ ಅನುಭವವನ್ನು ಮತ್ತು ಕರ್ತವ್ಯವನ್ನೂ ಸಹ ನಿಭಾಯಿಸಬೇಕು.ಪ್ರೀತಿ ಮಮತೆಗಳ ಸಾಗರವಾಗಿ ಆ ಮಕ್ಕಳಿಗೆ ಅಪ್ಪನಾಗಲು ಬಂದವನು ಕಾಣಬೇಕು.ಆ ಸಾಗರದಲ್ಲಿ ಆ ಮಕ್ಕಳು ಮುಳುಗದೇ ತೇಲದೆ ಮತ್ತು ಆ ಸಾಗರದಿಂದ ಜಿಗಿಯದೆ ಸದಾ ಈಜು ಸಾಹಸಿಗರಾಗಿ ಇರುವಂತೆ ಉತ್ತಮ ವಾತಾವರಣವನ್ನು ಸೃಷ್ಟಿಸಿಕೊಡಬೇಕು.ಸಮಾಜದ ಆಗು-ಹೋಗುಗಳನ್ನು ಮುಂಚಿತವಾಗಿಯೇ ಅರಿಯಬೇಕು. ಮುಗ್ಧತೆಯೊಂದಿಗೆಯೇ ಬದುಕಿನ ಜಟಿಲತೆಗಳನ್ನು ಜೀರ್ಣಿಸಿಕೊಳ್ಳುವ ಅನುಭವಿಯಾಗಬೇಕು.ಆ ಅನುಭವಗಳಿಂದ ತಿಳಿದ ಪ್ರಕಾರ ಮಕ್ಕಳಿಗೆ ಬದುಕಿನ ದಾರಿ ತೋರಬೇಕು.ಪ್ರೌಢಾವಸ್ಥೆಯ ಚಿಗುರಿನಲ್ಲಿರುವ ಮಕ್ಕಳಿಗೆ ಚೈತ್ರಮಾಸದ ಬಣ್ಣ ಬಣ್ಣ ಲೋಕವಿರುತ್ತದೆ.ಆ ಲೋಕಕ್ಕೆ ಕಪ್ಪು ಮಸಿಯನ್ನು ಬಳೆಯುವಷ್ಟು ಅಪ್ಪನೇ ಅಂಧಕಾರನಾಗಿರಬಾರದು.
ಆ ಕಾಮನಬಿಲ್ಲಿನ ಜಗತ್ತಿನಲ್ಲಿ ಮಾಯತೆಯನ್ನು ಸೃಷ್ಟಿಸುವ ಬಣ್ಣಗಳ ಬಗ್ಗೆ ಪರಿಚಿತನಾಗಿರಬೇಕು ಆ ಬಣ್ಣಗಳ ಮಾಯತೆಯನ್ನು ಬದಲಿಸಿ ಅದರಲ್ಲಿರುವ ಸುಂದರತೆಯನ್ನು ಮಾತ್ರ ಮಕ್ಕಳ ಬದುಕಲ್ಲಿ ಸದಾ ಮಾಸದಂತೆ ಇರಲು ಇರುವ ಯೋಜನೆಗಳ ಕಡೆ ಬದುಕಿನ ಆಯ್ಕೆಗಳ ಕಡೆ ಮಕ್ಕಳನ್ನು ಕೊಂಡೊಯ್ಯಬೇಕು.ಬಣ್ಣಗಳ ಮರ್ಮಗಳನ್ನು ತಿಳಿಯಪಡಿಸುವ ಜಾಣ್ಮೆ ತಂದೆಗೆ ಇರಬೇಕು.ಅದರ ವಿನಃ ಆತಂಕಗಳಲ್ಲಿ ತಿರಸ್ಕಾರಗಳನ್ನು ಮಕ್ಕಳಿಗೆ ತೋರಿದರೆ,ಹದಿಹರೆಯದ ಮಕ್ಕಳೆಂಬ ಅಧ್ಯಾಯದಲ್ಲಿ ತಂದೆ ಎನಿಸುವವನು ಅನುತ್ತೀರ್ಣನಾದಂತೆಯೇ ಆಗುತ್ತದೆ.ಈ ಘಟ್ಟವನ್ನು ಉತ್ತೀರ್ಣನಾಗದೆ ಜಿಗಿದರೆ ಮುಂದಿನ ಹಂತವೂ ಬದುಕಿಗೆ ಮುಳುವಾಗುತ್ತದೆ.ವಿರುದ್ಧ ಲಿಂಗಿಗಳ ಆಕರ್ಷಣೆಯೊಂದಿಗೆ ಬದುಕನ್ನು ಸಮಾಜದೊಂದಿಗೆ ಬೆಸೆದುಕೊಳ್ಳಲು ಸಿದ್ಧವಿರುವ ಯವ್ವನಾವಸ್ಥೆಯ ಮಕ್ಕಳಿಗೆ ತಂದೆ ಎನಿಸಿಕೊಳ್ಳುವವನು ಮಕ್ಕಳನ್ನು ಸ್ನೇಹಿತರನ್ನಾಗಿ ಪಡೆಯಬೇಕು.ಸ್ನೇಹದ ಸಲುಗೆಯಲ್ಲಿ ಹೊರ ಜಗತ್ತಿನ ವಿಚಾರಗಳಿಗೆ ಸಮಚಿಂತನೆಗಳ ಮೂಲಕ ಉತ್ತರ ಕಂಡುಕೊಳ್ಳುವ ದಿನಚರಿಗಳಲ್ಲಿ ಬೆರೆಯಬೇಕು.ಎಲ್ಲ ಸನ್ನಿವೇಶಗಳಲ್ಲೂ ಮಕ್ಕಳ ಜೊತೆ ನಿಂತು ಕೈ ಹಿಡಿದು ನಡೆಸುವ ವಿಶಿಷ್ಟ ಸಂಬಂಧವಾಗಿ ಗುರುತಾಗಬೇಕು.
ಮಕ್ಕಳು ಮೋಸ ಮಾಡುವಾಗ ಮೋಸ ಹೋಗುವಾಗ ಅಪ್ಪನ ಮೇಲಿನ ಪ್ರೀತಿ ಮತ್ತು ಸ್ವಾತಂತ್ರ್ಯದ ಸ್ಥಿರತೆ ಮಕ್ಕಳ ಮನಸ್ಸಿನಲ್ಲಿ ಮೂಡುವ ಹಾಗೆ ತಂದೆ ಆದವನು ಮಕ್ಕಳಿಗೆ ಸ್ವತಂತ್ರ ಪ್ರಭುವಾಗಿ ಕಾಣಿಸುವನಾಗಿ ಯವ್ವನ ಘಟ್ಟದ ವಿಚಾರಗಳಲ್ಲಿ ಮಾಗಿರಬೇಕು ಮತ್ತು ತನ್ನ ಯವ್ವನಾಸ್ಥಿತಿಯನ್ನು ಮೆಲುಕು ಹಾಕಬೇಕು.ತನ್ನ ಯವ್ವನಾವಸ್ಥೆಯ ಬದುಕಿನಲ್ಲಿ ತಾನೇ ಮಾಡಿದ ತಪ್ಪುಗಳಿಗೆ ಮಕ್ಕಳ ಯವ್ವನಾವಸ್ಥೆಯ ಮೂಲಕ ಕ್ಷಮೆ ಕೇಳಬೇಕು.ಕೆಲವುಗಳನ್ನು ಸರಿಪಡಿಸಬೇಕು.ವಿವಾಹದ ಆಯ್ಕೆಗಳು ಉದ್ಯೋಗದ ಆಯ್ಕೆಗಳು.ಕೌಟುಂಬಿಕ ಜವಬ್ದಾರಿಗಳು,ಸಮಾಜದ ಭಾಗವಹಿಸುವಿಕೆ,ರಾಷ್ಟ್ರೀಯತೆ ಹೀಗೆ ಮನುಷ್ಯತ್ವ ಸಂಬಂಧಿ ವಿಷಯಗಳೆಲ್ಲವನ್ನೂ ಮಕ್ಕಳ ಯವ್ವನಾವಸ್ಥೆಯಲ್ಲಿ ಸರಿಪಡಿಸಬೇಕು.ಈ ಹಂತದ ಪಾಠ ತಂದೆಯಾಗುವವನಿಗೆ ಚೆನ್ನಾಗಿ ಕರಗತವಾದರೆ ಮುಂದಿನ ದಿನಗಳಲ್ಲಿ ತನ್ನ ಮಕ್ಕಳನ್ನು ಉತ್ತಮ ತಂದೆಯಾಗಿ ತಾಯಿಯಾಗಿ ಕಾಣಲು ಸಾಧ್ಯವಾಗುತ್ತದೆ.ಮಧ್ಯವಯಸ್ಕರ ಮಕ್ಕಳಿಗೆ ವೃದ್ಧನಾದ ತಂದೆ ತನ್ನ ಮಗುತ್ವವನ್ನು ಪರಿಚಯಿಸಬೇಕು ತನ್ನ ತನುವಿನ ಅಸಹಾಯಕತೆಯಲ್ಲಿನ ತಿರುಳನ್ನು ತಿಳಿಯಪಡಿಸುವ ಕಲಿಕೆಯಲ್ಲಿ ಮತ್ತೊಮ್ಮೆ ಉತ್ತೀರ್ಣನಾಗಬೇಕು.ಆಲದ ಮರದಂತೆ ಜಾಲ ಬಿಟ್ಟು ಆಕಾಶದೆತ್ತರಕ್ಕೆ ಅಪ್ಪನಾಗುವ ಗುಣಧರ್ಮಗಳನ್ನು ಹೊಂದಬೇಕು.ಕೊನೆಯ ಫಲಿತಾಂಶ ಹೊರಬರುವುದು ತನ್ನ ಮಕ್ಕಳು ಆದರ್ಶ ತಂದೆಯಾಗಿ ಹೊರಬಂದಾಗ ಈತನ ಬದುಕಿನ ಕಥೆ ಯಶೋಗಾಥೆ ಆಗಿರುತ್ತದೆ.ಇಲ್ಲಿ ಮೇಲೆ ಹೇಳಿದ ರೀತಿಯಲ್ಲಿ ಮಕ್ಕಳಿಗೆ ಬದುಕಿನ ಎಲ್ಲಾ ಘಟ್ಟಗಳಲ್ಲಿ ಅಪ್ಪ ಎನ್ನುವ ಪ್ರಜ್ಞೆ ಕೆಲಸ ಮಾಡಬೇಕು.ಮಕ್ಕಳ ಬದುಕಿನ ಕಷ್ಟ, ಸುಖ, ಸೋಲು ,ಗೆಲುವು ಎಲ್ಲದರಲ್ಲೂ ಅಪ್ಪ ಎನ್ನುವ ಪ್ರಜ್ಞೆ ಇರಬೇಕು.ಈ ಪ್ರಜ್ಞೆಯ ಜೊತೆಗೆ ಬದುಕಿನ ಯಾವುದೇ ಜ್ಞಾನ ಮಕ್ಕಳಿಗೆ ದೊರೆತಾಗ ಆ ಮಕ್ಕಳು ಪ್ರಜ್ಞಾತೀತವಾಗಿಯೇ ತಮ್ಮ ಬದುಕಿನ ಘಟ್ಟಗಳನ್ನು ನಿರ್ಧರಿಸಿಕೊಳ್ಳುತ್ತಾರೆ.
ತಂದೆಯಾಗಬೇಕಾದರೆ ಆಸ್ತಿ ಅಂತಸ್ತು ಐಷರಾಮಿ ಬದುಕನ್ನು ಮಕ್ಕಳಿಗೆ ನೀಡಬೇಕು ಎನ್ನುವುದಲ್ಲ.ಮಕ್ಕಳನ್ನು ಸ್ವಲ್ಪವೂ ಕಷ್ಟದಲ್ಲಿ ನೋಯಿಸದೆ ಸಾಕುವುದೂ ಅಲ್ಲಾ.ತಂದೆ ಯಾಗುವುದೆಂದರೆ ಪ್ರಜ್ಞೆ ಯಂತಾಗುವುದು ,ಜ್ಞಾನವಂತನಾಗುವುದು, ಸರಳ ಬದುಕಾಗುವುದು, ಆತ್ಮಾನಂದದ ಹರಿಕಾರನಾಗುವುದು. ಬದುಕಿನ ಎಲ್ಲಾ ಘಟ್ಟಗಳ ಅನುಭವಕ್ಕೆ ಕುಗ್ಗದೆ ನಿಲ್ಲುವುದನ್ನು ಕಲಿಯುವುದು.ಆಧ್ಯಾತ್ಮಿಯಾಗುವುದು ಲೌಕಿಕ ಅಲೌಕಿಗಳ ಪಾತ್ರಗಳಿಗೆ ಹೊಂದಾಣಿಕೆಯಾಗುವುದು.ಇಷ್ಟೆಲ್ಲಾ ಆಗಲು ಮಕ್ಕಳಿಂದ ಕಲಿಯುವುದು ಮತ್ತು ಈ ಕಲಿಕೆಯೇ ಆದರ್ಶ ತಂದೆಯ ಸೂತ್ರಗಳು.ಯಾರು ಆದರ್ಶ ತಂದೆಯಾಗಿ ಪರಿಪೂರ್ಣನಾಗುತ್ತಾರೋ ಆ ಪರಿಪೂರ್ಣತೆಯಲ್ಲೇ ಅವರ ಮಕ್ಕಳ ಯಶಸ್ಸು ಅಡಗಿರುತ್ತದೆ. ಸಂತೋಷ ಅಡಗಿರುತ್ತದೆ.ಸಮಾಜಕ್ಕೆ ದೇಶಕ್ಕೆ ಉತ್ತಮ ಪ್ರಜೆಯಾಗುವ ಮಕ್ಕಳ ಗುಣಧರ್ಮ ಅಡಗಿರುತ್ತದೆ.ಮಕ್ಕಳ ಬದುಕಿನ ಎಲ್ಲಾ ವ್ಯವಸ್ಥೆಗಳು ಸುವ್ಯವಸ್ಥಿತಗೊಂಡಿರುತ್ತದೆ.ಆದರ್ಶ ತಂದೆಯಾದ ಸಂಧರ್ಭದಲ್ಲಿ ಆಶ್ರಮದ ಪರಿಚಯವಾಗುವುದಿಲ್ಲ ಮಕ್ಕಳಿಂದ ತಿರಸ್ಕಾರವಾಗುವುದಿಲ್ಲ.ಬದುಕಿನ ಕೊನೆಯ ಘಟ್ಟವು ನೋವಿನಿಂದ ಕೂಡಿರುವುದಿಲ್ಲ.ಎಲ್ಲವೂ ಒಳಿತಾಗಿಯೇ ಸಿಗುತ್ತದೆ.ತಾನು ಕಲಿತ ಮಕ್ಕಳೆಂಬ ಅಧ್ಯಾಯಗಳಲ್ಲಿ ಆದರ್ಶ ತಂದೆ ಎನಿಸಿದವನು ಮಹಾಗ್ರಂಥವಾಗಿ ಮಕ್ಕಳಿಗೆ ಸಿಗುತ್ತಾನೆ.ಆ ಮಕ್ಕಳು ಆ ಮಹಾಗ್ರಂಥದಿಂದ ತನ್ನ ಮಕ್ಕಳನ್ನು ಸುಲಭವಾಗಿ ಅಧ್ಯಯನ ಮಾಡಲು ತೊಡಗುತ್ತವೆ. ಅವುಗಳೂ ಸಹ ಆದರ್ಶ ತಂದೆ ಎನಿಸಿ ಮಹಾಗ್ರಂಥವಾಗುತ್ತವೆ.
*ಚಿಮಬಿಆರ್ (ಮಂಜುನಾಥ ಬಿ.ಆರ್)*
*ಯುವಸಾಹಿತಿ, ಸಂಶೋಧಕ, ವಿಮರ್ಶಕ.*
*ಹೆಚ್.ಡಿ.ಕೋಟೆ ಮೈಸೂರು.*
*ದೂರವಾಣಿ ಸಂಖ್ಯೆ:-8884684726*
*Gmail I’d:-manjunathabr709@gmail.com