ಚಾಮರಾಜನಗರ: ಹರದನಹಳ್ಳಿ ಹೋಬಳಿವ್ಯಾಪ್ತಿಯ ತಾವರೆಕಟ್ಟೆಮೋಳೆ, ಅಮಚವಾಡಿ ಗ್ರಾಮಗಳಲ್ಲಿ ಬಾಳೆ, ತೆಂಗು ಸೇರಿದಂತೆ ಈಚೆಗೆ ಬಿದ್ದ ಬಿರುಗಾಳಿಮಳೆಗೆ ನೆಲಕಚ್ಚಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ತೋಟಗಾರಿಕೆ, ಕೃಷಿಇಲಾಖೆ ಅಧಿಕಾರಿಗಳೊಂದಿಗೆ ತೆರಳಿ, ಬಾಳೆ, ತೆಂಗು ಸೇರಿದಂತೆ ಇತರೇ ಬೆಳೆಗಳನ್ನು ಪರಿಶೀಲಿಸಿದರು.
ತಾಲ್ಲೂಕು ತೋಟಗಾರಿಕೆ ಇಲಾಖೆ ಅಂಕಿಅಂಶದ ಪ್ರಕಾರ ಕಳೆದ ಮೂರುದಿನದ ಹಿಂದೆ ಮಳೆಜತೆ ಬಿರುಗಾಳಿಗೆ ಹರದನಹಳ್ಳಿ, ತಾವರಕಟ್ಟೆಮೋಳೆ, ಅಮಚವಾಡಿ, ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆಗಿಡ ನೆಲಕಚ್ಚಿದ್ದು, ೩೨ ಎಕರೆಯಷ್ಟು ಬೆಳೆಹಾನಿಯಾಗಿದೆ ಎನ್ನಲಾಗಿದೆ.
ಇದೇವೇಳೆ ರೈತರು’ ತಾವು ಸಾಲಸೋಲ ಮಾಡಿ, ಬೆಳೆಹಾಕಿದ್ದೆವು. ಬಿರುಗಾಳಿಮಳೆಗೆ ನಮ್ಮ ಫಸಲು ನಷ್ಟವಾಗಿದ್ದು, ಕೈಗೆಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆಗಿರುವ ಬೆಳೆಯ ನಷ್ಟದ ಅಂದಾಜನ್ನು ಪರಿಶೀಲಿಸಿ, ಸರಕಾರದಿಂದ ವೈಜ್ಞಾನಿಕ ಸೂಕ್ತಪರಿಹಾರ ಮಂಜೂರುಮಾಡಿಸಿಕೊಡಬೇಕು ಎಂದು ಶಾಸಕರಲ್ಲಿ ರೈತರು ಮನವಿ ಮಾಡಿದರು.
ಶಾಸಕರು ಪ್ರತಿಕ್ರಿಯಿಸಿ’ ಬೆಳೆನಾಶದಿಂದ ಕಂಗಾಲಾಗಿರುವ ರೈತರ ಬೆಳೆನಷ್ಟದ ಅಂದಾಜನ್ನು ಪರಿಶೀಲಿಸಿ, ಸೂಕ್ತ ಪರಿಹಾರ ಮಂಜೂರಾಗುವ ನಿಟ್ಟಿನಲ್ಲಿ ಸರಕಾರಕ್ಕೆ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ವರದಿಸಲ್ಲಿಸಬೇಕು, ಈ ಕೆಲಸ ತುರ್ತಾಗಿ ಆಗಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ್, ತೋಟಗಾರಿಕೆ, ಕೃಷಿಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಿದ್ದರಾಜು, ಸಹಾಯಕ ನಿರ್ದೇಶಕ ಕೆಂಪರಾಜು, ಜಂಟಿಕೃಷಿನಿರ್ದೇಶಕಿ ಎಚ್.ಟಿ.ಚಂದ್ರಕಲಾ, ತಹಸೀಲ್ದಾರ್ ಬಸವರಾಜು, ಜಿಪಂ ಮಾಜಿಸದಸ್ಯ ರಮೇಶ್, ತಾಪಂ ಮಾಜಿಸದಸ್ಯ ಮಹದೇವಶೆಟ್ಟಿ, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ಹಾಜರಿದ್ದರು.
