ವಿಶ್ವ ಬೈಸಿಕಲ್ ದಿನವನ್ನು ಜೂನ್ 3 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲ್ಯದ ಬೈಸಿಕಲ್ಲಿನ ನಂಟು ಸ್ಪೂರ್ತಿದಾಯಕ ಕ್ಷಣಗಳು ಪ್ರತಿಯೊಬ್ಬರನ್ನು ಕಾಡದಿರದು ಇಂತಹ ಕ್ಷಣಗಳನ್ನು ಎಂ.ಜಯಶಂಕರ್ ಹಂಚಿಕೊಂಡಿದ್ದಾರೆ.

ಪೀಟರ್ ಗೋಲ್ಕಿನ್ ಹೀಗೆ ಹೇಳುತ್ತಾರೆ ” ಜೀವನದಲ್ಲಿ ನನ್ನ ಎರಡು ನೆಚ್ಚಿನ ವಿಷಯಗಳು ಗ್ರಂಥಾಲಯಗಳು ಮತ್ತು ಬೈಸಿಕಲ್ ಗಳು ಇವೆರಡೂ ಏನನ್ನೂ ವ್ಯರ್ಥ ಮಾಡದೆ ನಮ್ಮನ್ನು ಮುಂದೆ ಸಾಗಿಸುತ್ತವೆ” ಹಿಂದೆ ಬೈಸಿಕಲ್ ಸಾಮಾನ್ಯರ ಜೀವನದ ಒಂದು ಭಾಗವಾಗಿತ್ತು. ಇದೀಗ ಅದು ಆರೋಗ್ಯ ಭಾಗ್ಯದ ಬಾಗಿಲಾಗಿದೆ. ಬಾಲ್ಯದಲ್ಲಿ ಬೈಸಿಕಲ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ತಾನೆ ಹೇಳಿ ? ಅದೇ ನಮಗೆ ಕಾರು, ಬಸ್ಸು, ವಿಮಾನ ಇದ್ದ ಹಾಗೆ.ಸೈಕಲ್ ಸವಾರಿ ಅಂದ್ರೆ ನಮಗೆ ಎಲ್ಲಿಲ್ಲದ ಸಂತೋಷ, ಸಂಭ್ರಮಕ್ಕೆ ಪಾರವೇ ಇಲ್ಲ. ನಮಗೇನು ಇಂದಿನ ಹಾಗೆ ಚಿಕ್ಕ ಚಿಕ್ಕ ಬೈಸಿಕಲ್ ಕೊಡಿಸುತ್ತಿರಲಿಲ್ಲ, ಅದರ ಬಗ್ಗೆ ಗೊತ್ತು ಇರಲಿಲ್ಲ ಬಿಡಿ. ನಾನು ಮೊದಲು ಬೈಸಿಕಲ್ ಒಂದು ಪೆಡಲ್ ಒತ್ತುವುದರ ಮೂಲಕ ಕಲಿಯಲು ಪ್ರಾರಂಭಿಸಿದೆ.


ಈ ಸಂದರ್ಭದಲ್ಲಿ ಸ್ಕಾಟ್ ಸೋಲ್ ಅವರು “ಪ್ರಪಂಚದಾದ್ಯಂತ ಬೈಸಿಕಲ್ ಸವಾರಿ ಒಂದೇ ಪೆಡಲ್ ಸ್ಟ್ರೋಕ್ ನಿಂದ ಪ್ರಾರಂಭವಾಗುತ್ತದೆ ” ಎಂದು ಹೇಳಿದ ಮಾತು ನೆನಪಿಗೆ ಬರುತ್ತದೆ. ನಂತರ ದಿನಗಳಲ್ಲಿ ನಾನು ಎರಡು ಪೆಡಲ್ಲುಗಳನ್ನು ಒತ್ತುವುದರ ಮೂಲಕ ಮತ್ತೆ ಮುಂದೆ ನಾನು ಎತ್ತರ ಬೆಳೆದಂತೆ ಸೀಟಿನ ಮೇಲೆ ಕುಳಿತು ಬೈಸಿಕಲ್ ತುಳಿಯುವುದಕ್ಕೆ ಪ್ರಾರಂಭಿಸಿದೆ. ನನ್ನ ಜೀವನದಲ್ಲಿ ಬೈಸಿಕಲ್ ಕಲಿಯುವ ಛಲದ ನೆನಪುಗಳನ್ನು ಮರೆಯುವಂತಿಲ್ಲ ಏಕೆಂದರೆ ಕಲಿಯುವಾಗ ಭಯ,ಬೀಳುವ ಆತಂಕ,ಬಿದ್ದರೆ ಏನಾಗುತ್ತೋ ಅನ್ನುವ ಆತಂಕದಿಂದಲೆ ಕಲಿಯುವ ಛಲ , ಅದೆಷ್ಟು ಬಾರಿ ಎದ್ದು ಬಿದ್ದು ಗಾಯಗಳು ಆಗಿದ್ದುದು ಗೊತ್ತಿಲ್ಲ ,ಎಷ್ಟೆ ಬಿದ್ದುಎದ್ದರೂ ಬೈಸೈಕಲ್ ಕಲಿಕೆ ಬಿಡುತ್ತಿರಲಿಲ್ಲ. ಬೈಸಿಕಲ್ ಮಜಾನೆ ಹಾಗೆ ಇರುತ್ತಿತ್ತು.ಇತ್ತೀಚಿಗೆ ಯುವಕರು ಬೈಕ್ ಮಜದತ್ತ ವಾಲಿದ್ದಾರೆ. ಸದ್ಯ ಆರೋಗ್ಯ ದೃಷ್ಟಿಯಿಂದ ಕೆಲವರು ದಿನವೂ ಸೈಕ್ಲಿಂಗ್ , ಕೆಲವರೂ ರಜಾ ದಿನಗಳಲ್ಲಿ ಸೈಕ್ಲಿಂಗ್ ಮಾಡುತ್ತಾರೆ.

ರಜಾ ದಿವಸಗಳೆಂದರೆ ಬೈಸಿಕಲ್ ನಲ್ಲೆ ನಮ್ಮ ಪ್ರವಾಸ ಅದು ನಮಗೆ ಬೈಸಿಕಲ್ ಮಜವು ಕೂಡ ಆಗಿತ್ತು. ನಾ ನಿನ್ನ ಮರೆಯಲಾರೆ ಸಿನಿಮಾ ನೋಡುವುದಕ್ಕೆ ಯಳಂದೂರಿನಿಂದ ಕೊಳ್ಳೆಗಾಲದ ಶಾಂತಿ ಚಿತ್ರ ಮಂದಿರಕ್ಕೆ ಬೈಸಿಕಲ್ ನಲ್ಲಿ ಹೋಗಿ ಬರುವಾಗ ಚಿತ್ರದ ದೃಶ್ಯಗಳನ್ನು ಮೆಲುಕುಹಾಕುತ್ತ ಮನೆಗೆ ಲೇಟಾಗಿ ಬಂದು ಬೈಗುಳ ತಿಂದು ಬೇಸರಿದಿಂದ ನಿದ್ರೆಗೆ ಜಾರಿದೆನು.
ಹೀಗೆ ಎಲ್ಲಾ ಸಂಬಂಧಿಕರ ಊರಿಗೆ, ಜಾತ್ರೆಗೆ, ಹಬ್ಬಗಳಿಗೆ ,ಬೆಟ್ಟ ಗುಡ್ಡಗಳಿಗೆ ಬೈಸಿಕಲ್ ನಲ್ಲೆ ಪ್ರಯಾಣ. ರಸ್ತೆಯ ಇಕ್ಕೆಲಗಳಲ್ಲಿ ಕಾಣಸಿಗುವ ಪ್ರಕೃತಿ ಸೌಂದರ್ಯದ ಮನಮೋಹಕ ದೃಶ್ಯಗಳ ಆಹ್ಲಾದಕರ, ತಂಪಾದ ಗಾಳಿ, ಮಳೆಯಲಿ ನೆನೆದು ಒದ್ದೆಯಾದ ದೇಹಗಳ ಚಳಿ ಚಳಿ ನೆನಪುಗಳು, ಗುಡಿಸಲು ಹೋಟಲ್ ನಲ್ಲಿ ಬಿಸಿ ಬಿಸಿ ಬೋಂಡ, ವಡೆ ತಿಂದು ಟೀ ಹೀರಿದ ಸವಿ ಸವಿ ನೆನಪುಗಳನ್ನು ಜ್ಞಾಪಿಸಿಕೊಂಡರೆ ಸಾಕು ಮೈ ಪುಳಕಗೊಳ್ಳುತ್ತದೆ. ಅಣ್ಣಾವರು “ಎರಡು ಕನಸು “ಚಿತ್ರದಲ್ಲಿ ಸ್ಕೂಟರ್ ಸವಾರಿ ಸಂದರ್ಭದಲ್ಲಿ
ಹೇ…..ಹೇ….ಹೇ…ಆ ಹಾ ಹಾ ಹಾ ….ಓಹೋ
ಹೋ ಹೋ ಹೋ……ಲ ಲಾ ಲ ಲ
ಎಂದು ನಿನ್ನ ನೋಡುವೆ , ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ
ನಿಜ ಹೇಳಲೇನು ನನ್ನ ಜೀವ ನೀನು………….
ಈ ಹಾಡನ್ನು ನಾನು ಸಹ ಸೈಕಲ್ ಮೇಲೆ ಸವಾರಿ ಮಾಡಿಕೊಂಡು ನನ್ನದೇ ಕನಸಿನ ಸರಮಾಲೆಯಲಿ ಹಾಡುತ್ತಾ ಆನಂದ ಪಡುತ್ತಿದ್ದ ನೆನಪು ಕಾಡುತ್ತಿದೆ. ಬೈಸಿಕಲ್ ಪ್ರಯಾಣದಲ್ಲಿ ಪ್ರಾಣಾಪಾಯದ ಘಟನೆಗಳು ಆಗಿದ್ದುಂಟು, ಅದರಿಂದ ಪಾರಾದ ದೃಶ್ಯಗಳನ್ನು ನೆನೆಪಿಸಿಕೊಂಡರೆ ಈಗಲೂ ಎದೆ ಡವ್ ಡವ್

ಅನಿಸುತ್ತದೆ


ನಾನು ಯಳಂದೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದೆ.ದಿನನಿತ್ಯ ಕೊಮಾರನಪುರದಲ್ಲಿದ್ದ ನಮ್ಮದೇ ದನಗಳ ದೊಡ್ಡಿಯಿಂದ ಹಾಲು ತರುವುದು ಹೆಚ್ಚು ಕಡಿಮೆ ನನ್ನದೆ ಕೆಲಸ . ನಮ್ಮ ಮನೆಯಲ್ಲಿ ಬೇರೆಯವರಿಗೆ ಅವಕಾಶ ಕೊಡುತ್ತಿರಲಿಲ್ಲ. ಏಕೆಂದರೆ ಬೈಸಿಕಲ್ ಸವಾರಿಯಲ್ಲಿ ಸಿಗುವ ಸಂತೋಷ ನನ್ನದಾಗಿತ್ತು. ಯಾವುದಾದರು ಹೊಸ ಬೈಸಿಕಲ್ ಶಾಪ್ ಓಪನ್ ಆದರೆ ಅಲ್ಲಿಗೆ ಹಾಜರ್. ಹೊಸ ಬೈಸಿಕಲ್ ಸವಾರಿ ಮಾಡುವ ಖುಷಿ. ಯಳಂದೂರಿನಿಂದ ಕೊಮಾರನಪುರಕ್ಕೆ ಹೋಗಿ ಬರುವ ದಾರಿಯಲ್ಲಿ ಆಗಾಗ್ಗೆ ಕಾಣ ಸಿಗುವ ನೋಟಗಳ ಖುಷಿ ,ಏನೆಂದರೆ ಗಂಡ ಸಂಕೋಚವಿಲ್ಲದೆ ಹೆಂಡತಿಯನ್ನು ಬೈಸಿಕಲ್ ಮೇಲಿನ ಮುಂದಿನ ಕಂಬಿಯಮೇಲೆ ಕೂರಿಸಿಕೊಂಡು ಬೈಸಿಕಲ್ ಮೇಲೆ ನನ್ನ ಮೈನಾ ಅಂತ ಗುನುಗುತ್ತಾ ಹೋಗುವ ದೃಶ್ಯದ ಮಜವೇ ಬೇರೆ ,ನೋಡಿ ಹುಸಿ ನಗೆ ಬೀರುತ್ತಿದ್ದೆ. ಈ ಸಂರ್ಭದಲ್ಲಿ ಬೆಂಕಿ ಬಲೆಯ ಚಿತ್ರದಲ್ಲಿ ಅನಂತನಾಗ್ ,ಲಕ್ಷ್ಮಿ ಜೋಡಿ ಬೈಸಿಕಲ್ ಮೇಲೆ
“ನಿನ್ನ ನಗುವು ಹೂವಂತೆ ,ನಿನ್ನ ನುಡಿಯು ಹಾಡಂತೆ ಚಿತ್ರದ ದೃಶ್ಯಗಳು ಕಣ್ಮುಂದೆ ಹಾಗೆ ಬಂದು ಹೋಗುತ್ತದೆ. ಈ ದೃಶ್ಯವನ್ನು ದೊರೆ -ಭಗವಾನ್ ಅವರು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾರೆ .ನೀವುಗಳ ಸಹ ನಿಮ್ಮ ಮಡದಿಯ ಜೊತೆ ಬೈಸಿಕಲ್ ಸವಾರಿ ಮಾಡಿದ್ದರೆ ಒಮ್ಮೆ ನೆನಪಿನ ಬುತ್ತಿಯನ್ನು ಕಣ್ತುಂಬಿಕೊಳ್ಖಿ.ಇಲ್ಲದಿದ್ದರೆ ನಿಮ್ಮ ಮನೆಯ ಕಾಂಪೌಂಡ್ ನೊಳಗೆ ಒಂದು ಬಾರಿ ನೀವು ಯಾಕೆ ಪ್ರಯತ್ನ ಪಡಬಾರದು ಏನಂತೀರ? ಕೆಲವರು ಬೈಸಿಕಲ್ ಗೆ ರೇಡಿಯೋ ಕಟ್ಟಿಕೊಂಡು ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಹೋಗುವ ಪರಿಯ ಆನಂದದ ಕ್ಷಣಗಳ ದೃಶ್ಯ, ಇನ್ನು ಕೆಲವರು ಆಹಾರ ಪದಾರ್ಥಗಳನ್ನು ಒಯ್ಯುವ ದೃಶ್ಯಗಳು ಕಾಣಸಿಗುತ್ತಿತ್ತು.
ಹಿಂದೆ ಬೇರೆ ವಾಹನಗಳ ಸೌಕರ್ಯ ಇಲ್ಲದೆ ಬೈಸಿಕಲ್ ನ್ನೇ ಮೇಲೆ ಹೆಚ್ಚು ಅವಲಂಬಿಸಿದ್ದರು. ಆಗ ಸಿನಿಮಾಗಳ ಪ್ರಚಾರ ಮಾಡಲು ಬೈಸಿಕಲ್ ಹಿಂದಿನ ಚಕ್ರಗಳಿಗೆ ಸಿನಿಮಾ ಪೋಸ್ಟರ್ ಗಳನ್ನು ಕಟ್ಟಿ ಪೆಡಲ್ ಒತ್ತಿದಾಗ ಸೌಂಡ್ ಬರುವಂತೆ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದುದು ಅದರ ಹಿಂದೆ ನಾವೆಲ್ಲ ಚಿಕ್ಜವರಿದ್ದಾಗ ಓಡುತ್ತಿದ್ದುದು ಜ್ಙಾಪಿಸಿಕೊಂಡರೆ ನಗು- ನಾಚಿಕೆ ಎರಡು ಆಗುತ್ತದೆ ಹೀಗೆಲ್ಲಾ ಮಾಡಿದ್ದೀವ ಅಂತ. ಸರ್ಕಸ್ ಕಂಪನಿಗಳಲ್ಲಿ ಮನರಂಜನೆಗಾಗಿ ಬೈಸಿಕಲ್ ಗಳನ್ನು ಬಳಸುವುದನ್ನು ಕಂಡಿದ್ದೇವೆ.
ಅಂಚೆಯವ ಕಾಗದ ಪತ್ರಗಳನ್ನು ಬೈಸಿಕಲ್ ಮೇಲೆ ಹೊತ್ತು ಮನೆಗಳ ಮುಂದೆ ಟ್ರಿಣ್ ಟ್ರಿಣ್ ಶಬ್ದ ಮಾಡುತಾ ಪೋಸ್ಟ್ ಎಂದ ಕೂಗತ್ತಿದ್ದುದು ಅದರಲ್ಲಿ ಮನಿ ಆರ್ಡರ್, ಪತ್ರಗಳು, ಪ್ರೇಮಿಗಳು ಪ್ರೇಮ ಪತ್ರಗಳನ್ನು ಕಾಯುವ ದೃಶ್ಯ ಇತ್ಯಾದಿ ಕಾಣಬರುತ್ತಿದ್ದವು ಅಲ್ಲವೇ?
ಪತ್ರಗಳು ಓದುವ ಮಜ, ಸಂತೋಷ ಇಂದಿನ ವಾಟ್ಸಪ್, ಇನಸ್ಟಾಗ್ರಾಮ್, ಮೆಸೇಜ್ ನಿಂದ ಆ ಸಂತೋಷ ಸಿಗಲು ಸಾದ್ಯವೇ ನೀವೆ ಹೇಳಿ? ವಿಜಯ ದಶಮಿ ಆಯುಧ ಪೂಜೆ ದಿವಸ ಒಂದು ಘಟನೆಯನ್ನು ನಾನು ಇಲ್ಲಿ ಉಲ್ಲೇಖ ಮಾಡಲೆ ಬೇಕು. ನಮ್ಮ ಮನೆಗೆ ನಮ್ಮ ಅತ್ತೆಯ ತಂದೆ ಬೈಸಿಕಲ್ ನಲ್ಲಿ ಬಂದಿದ್ದರು. ಅವರು ಬೈಸಿಕಲ್ ನಿಲ್ಲಿಸಿ ಮನೆಯಳೊಗೆ ಬರುವ ಸಮಯ ಕಾದು ಬೈಸಿಕಲ್ ಹತ್ತಿ ಯಳಂದೂರಿನ ಸೇತುವೆ ಮೇಲೆ ಖುಷಿಯಿಂದ ಸಾಗುತ್ತಿದ್ದೆ ಮುಂದೆ ಇಳುಜಾರು ಬಂತು ಎದುರುಗಡೆ ಒಬ್ಬ ಮಹಿಳೆ ಬರುತ್ತಿದ್ದಳು. ನಾನು ಬೈಸಿಕಲ್ ಬ್ರೇಕ್ ಹಾಕುತ್ತಾ ಇದ್ದೀನಿ ನಿಲ್ಲುತ್ತಾನೆ…ಇಲ್ಲ….. , ಏಕೆಂದರೆ ಬೈಸಿಕಲ್ ಗೆ ಬ್ರೇಕ್ ಇರಲಿಲ್ಲ. ವಿಧಿಯಿಲ್ಲದೆ ಆ ಮಹಿಳೆಗೆ ಸೀದಾ ಹೋಗಿ ಗುದ್ದಿ ಬಿಟ್ಟು ಎದ್ನೋ ಬಿದ್ನೋ ಅಂತ ಬೈಸಿಕಲ್ ಹತ್ತಿಕೊಂಡು ಬಂದು ಬೈಸಿಕಲ್ ಮೆತ್ತಗೆ ನಿಲ್ಲಿಸಿ ಮನೆ ಒಳಗೆ ಸೇರಿಕೊಂಡೆ.


ಅದು ಹೇಗೊ ಆ ಮಹಿಳೆಗೆ ನಮ್ಮ ಮಾವನರ ಅಂಗಡಿ ಗೊತ್ತಾಗಿ ನಿಮ್ಮ ಮಗ ಬೈಸಿಕಲ್ ನಲ್ಲಿ ಗುದ್ದಿದ್ದಾನೆ ಗಾಯಗಳಾಗಿವೆ ರಕ್ತ ಬಂದಿದೆ, ಹಣ ಕೊಡಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಗಲಾಟೆ ಮಾಡಿ ಹಣ ವಸೂಲಿ ಮಾಡಿಕೊಂಡು ಹೋಗಿದ್ದಾಳೆ, ಮಾವನವರು ಸಂಜೆ ಬಂದು ಅವರ ಮಗನಿಗೆ ಮಾರಿಹಬ್ಬ ಮಾಡಿದರು, ನಾನು ಒಳಗೊಳಗೆ ಉಸಿನಗೆ ಬೀರುತ್ತಾ ಬದುಕಿದೆಯಾ ಬಡ ಪಾಯಿ ಅಂದು ಕೊಂಡೆ.ಏಕೆಂದರೆ ಆ ಮಹಿಳೆ ನಿಮ್ಮ ಅಳಿಯ ಅಂತ ಹೇಳುವುದಕ್ಕೆ ಬದಲು ನಿಮ್ಮ ಮಗ ಅಂತ ಹೇಳಿ ಬಿಟ್ಡಿದ್ದಳು. ಈಗ ಇಂದಿನ ಜೀವನದಲ್ಲಿ ಆರೋಗ್ಯಕ್ಕೋಸ್ಕರ ಸೈಕಲ್ ತುಳಿಯುವ ಹಾಗೆ ಹಾಗಿದೆ. ಲಾಕ್ ಡೌನ್ ಪರಿಣಾಮವಾಗಿ ಜಿಮ್, ಯೋಗ ಮಂದಿರಗಳು ಮುಚ್ಚಿರುವುದರಿಂದ ಸೈಕ್ಲಿಂಗ್ ಟ್ರೆಂಡ್ ಜಾಸ್ತಿಯಾಗಿದೆ ಇತ್ತೀಚೆಗೆ ಯವತಿಯರು, ಮಹಿಳೆಯರಲ್ಲೂ ಹೆಚ್ಚು ಬೈಸಿಕಲ್ ಸವಾರಿ ಮಾಡುವ ದೃಶ್ಯಗಳನ್ನು ಕಾಣುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ.
ಸರ್ಕಾರ ಸಾರಿಗೆ ಸೌಕರ್ಯ ಇಲ್ಲದೆ ಕಡೆ ಹಳ್ಳಿಮಕ್ಕಳಿಗೆ ದೂರದ ಶಾಲೆಗಳಿಗೆ ಹೋಗಿಬರಲು ಉಚಿತ ಬೈಸಿಕಲ್ ವಿತರಣೆ ಮಾಡುತ್ತಿದೆ. ಇದು ಮಕ್ಕಳಿಗೆ ಅನುಕೂಲದಜೊತೆಗೆ ದೇಹಕ್ಕೆ ವ್ಯಾಯಾಮವಾಗಿ ಆರೋಗ್ಯವಂತಾಗಿರಲು ಸಹಕಾರಿಯಾಗುತ್ತದೆ.

By admin