ರೈತರ ಖಾತೆಗೆ ಬೆಳೆ ವಿಮೆ ಪಾವತಿ: ಮನವಿಗೆ ಕೃಷಿ ಸಚಿವ ಸಕಾರಾತ್ಮಕ ಸ್ಪಂದನೆ

 

ಗುಂಡ್ಲುಪೇಟೆ: ಕಳೆದ ವರ್ಷ ಜನವರಿ ತಿಂಗಳಲ್ಲಿ ಜಿಲ್ಲೆಯ ರೈತರ ಬೆಳೆ ವಿಮೆ ನೀಡಬೇಕು ಎಂದು ಅಹೋರಾತ್ರಿ ಧರಣಿ ನಡೆಸಿದ್ದ ರೈತ ಸಂಘಟನೆಗೆ ಜಯ ಸಿಕ್ಕಂತಾಗಿದೆ.

 

ಬೆಳೆ ವಿಮೆಗಾಗಿ ಅಹೋರಾತ್ರಿ ಧರಣಿ ಸೇರಿದಂತೆ ಮೂವತ್ತಕ್ಕೂ ಹೆಚ್ಚಿನ ಪ್ರತಿಭಟನೆಗಳು ನಡೆದಿದ್ದವು.

ಕಳೆದ ವಾರ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲ್ಲೂಕಿಗೆ ಆಗಮಿಸಿದ್ದಾಗ ರೈತರಿಂದ ಪ್ರತಿಭಟನೆ ಬಿಸಿ ತಟ್ಟಿತ್ತು. ಆ ಸಮಯದಲ್ಲಿ ಬೆಂಗಳೂರಿನ ಕಚೇರಿಗೆ ಬನ್ನಿ ಕುಳಿತು ಮಾತನಾಡಿ ಬಗೆಹರಿಸೋಣ ಎಂದು ಭರವಸೆ ನೀಡಿದ್ದರು. ಅದರಂತೆ ತಾಲ್ಲೂಕಿನ ಹಸಿರು ಸೇನೆ ಮತ್ತು ರೈತ ಸಂ ಸಂಘದ ಮುಖಂಡರು ಬೆಂಗಳೂರಿನಲ್ಲಿ ಕೃಷಿ ಸಚಿವರನ್ನು ಭೇಟಿಯಾಗಿ ಬೆಳೆ ವಿಮೆ ಪಡೆಯುವಲ್ಲಿ ಯಶಸ್ವಿಯಾದರು.

 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲೆಯಾದ್ಯಾಂತ 19,310 ಜನ ವಿಮೆ ಕಟ್ಟಿದವರು. ಅದರಲ್ಲಿ ಈಗಾಗಲೇ 6.30 ಕೋಟಿ ಹಣ ಬಿಡುಗಡೆ ಆಗಿ 18,895 ಜನರಿಗೆ ಬೆಳೆ ವಿಮೆ ಬಂದಿದೆ. ಆದರೆ ದಾಖಲೆಗಳು ತಪ್ಪಾಗಿದೆ ಎಂದು 415 ರೈತರಿಗೆ ವಿಮೆ ಬಂದಿರಲಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿವರೆಗೆ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಇದೀಗ ಬಾಕಿ ಉಳಿದ ರೈತರಿಗೆ ಒಂದು ವಾರದಲ್ಲಿ ಸರಿಪಡಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಜಿಲ್ಲಾ ವಿಭಾಗೀಯ ಕಾರ್ಯದರ್ಶಿ ಮಹೇಶ್ ಪ್ರಭು, ಜಿಲ್ಲಾಧ್ಯಕ್ಷ ಹೆಬ್ಸೂರು ಬಸವಣ್ಣ, ಜೋತಿಗೌಡನಪುರ ಸಿದ್ದರಾಜು, ರೈತ ಮುಖಂಡರಾದ ಶಿವಮಲ್ಲು, ದಿಲೀಪ್, ಕುಮಾರ್, ಪ್ರಕಾಶ್ ಮೊದಲಾದವರು ಇದ್ದರು.

ವರದಿ: ಬಸವರಾಜು ಎಸ್ ಹಂಗಳ

By admin