76 ಮಂದಿ ರೈತರಿಗೆ ಬೆಳೆ ಸಾಲದ ಚೆಕ್ ವಿತರಣೆ
ಗುಂಡ್ಲುಪೇಟೆ: ಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 76 ಮಂದಿ ರೈತರಿಗೆ ಬೆಳೆ ಸಾಲದ ಚೆಕ್ ಅನ್ನು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎಂ.ಪಿ. ಸುನೀಲ್ ವಿತರಿಸಿದರು.
ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎಂ.ಪಿ. ಸುನೀಲ್, ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ 4.18 ಕೋಟಿ ರೂ. ಬೆಳೆ ಸಾಲವನ್ನು ಈ ಸಂಘದ ಮೂಲಕ ವಿತರಿಸಲಾಗುತ್ತಿದೆ. ಸಾಲ ಪಡೆದ ರೈತರು ಕಡ್ಡಾಯವಾಗಿ ಮರು ಪಾವತಿಸಬೇಕು. ಇದರಿಂದ ಮಾತ್ರ ಬ್ಯಾಂಕ್ ಅಭಿವೃದ್ಧಿಯಾಗಲಿದ್ದು, ನೀವು ಮರು ಪಾವತಿಸಿದ ಹಣದಿಂದ ಮತ್ತಷ್ಟು ರೈತರಿಗೆ ಸಾಲ ನೀಡಲು ಸಾಧ್ಯ ಎಂದು ತಿಳಿಸಿದರು.
ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಬೆಳೆ ಸಾಲದ ಜೊತೆಗೆ ಇತರೆ ಸಾಲ ಪಡೆದವರು ಸಾಲ ಮರು ಪಾವತಿಸಬೇಕು. ಯಾರು ಸಹ ನಿರ್ಲಕ್ಷ್ಯ ವಹಿಸಬಾರದು. ಇದರಿಂದ ಬ್ಯಾಂಕ್ ಪ್ರಗತಿಗೆ ತೊಡಕಾಗಲಿದೆ. ಈಗಾಗಲೇ ಸಂಘದಲ್ಲಿ ವಾರ್ಷಿಕ 53 ಕೋಟಿ ವಹಿವಾಟು ನಡೆಸಲಾಗಿದೆ. ಸಾಲ ಪಡೆದು ಕಟ್ಟದವರಿಗೆ ನೋಟಿಸ್ ನೀಡಲಾಗಿದೆ. ಅಂತಿಮ ನೋಟಿಸ್ ನೀಡಿ ಆಗಲು ಕಟ್ಟದಿದ್ದರೆ ಕ್ರಮ ಜರುಗಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಶಿವನಾಗಪ್ಪ, ಸಂಘದ ನಿರ್ದೇಶಕರಾದ ಹೊಸೂರು ಶಿವಣ್ಣ, ಎನ್. ಕುಮಾರ್, ಆರ್.ಎಂ. ಮಹದೇವೇಗೌಡ, ಚೇತನ್, ವೆಂಕಟೇಶ್, ಮಧು, ಗ್ರಾಪಂ ಸದಸ್ಯ ವೀರನಪುರ ಗುರುಪ್ರಸಾದ್, ಬ್ಯಾಂಕ್ ಹಿರಿಯ ಸೂಪರ್ ವೈಸರ್ ರಮೇಶ್, ಸೂಪರ್ ವೈಸರ್ ಚಂದ್ರಮೌಳಿ, ಸಂಘದ ಸಿಇಒ ಮಹದೇವ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ