ಮೈಸೂರು, ಮೇ 2: ಕೋವಿಡ್ ಕುರಿತ ಜನರ ಆತಂಕ, ಗೊಂದಲ, ನಿವಾರಣೆಗೆ  ಮೈಸೂರಿನ ಮೂರು ಕಡೆ ಆರಂಭಿಸಲಾಗುತ್ತಿರುವ “ಕೋವಿಡ್ ಮಿತ್ರ” ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು  ಸಲಹಾ ಕೇಂದ್ರದ ಅಂತಿಮ ಸಿದ್ಧತೆಯನ್ನು ಭಾನುವಾರ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ, ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪ ನಾಗ್, ಮತ್ತಿತರ ಅಧಿಕಾರಿಗಳು, ವೈದ್ಯರು ಪರಿಶೀಲಿಸಿದರು.

 

ವಾರ್ ರೂಂ ಆರಂಭಿಸಿ 0821-2424111 ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದ ನಂತರ ಕೆಲವೇ ದಿನಗಳಲ್ಲಿ ಸುಮಾರು 2 ಸಾವಿರ ದೂರವಾಣಿ ಕರೆ ಬಂದಿದೆ. ಪಾಸಿಟಿವ್ ಇಲ್ಲದಿದ್ದರೂ ಸೋಂಕಿನ ಲಕ್ಷಣ ಇವೆ, ಏನು ಮಾಡುವುದು ಎಂಬ ಗೊಂದಲದಲ್ಲಿದ್ದೀವಿ ಎಂಬ ಆತಂಕದ ಕರೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಈ ಗೊಂದಲ, ಆತಂಕ ನಿವಾರಣೆಗೆ ಕೋವಿಡ್ ಮಿತ್ರ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.

 

ಜೆ‌‌.ಎಲ್.ಬಿ. ರಸ್ತೆಯಲ್ಲಿರುವ ಸೇಠ್ ಮೋಹನ್‌ದಾಸ್ ತುಳಸಿದಾಸ್ ಆಸ್ಪತ್ರೆ, ಎನ್.ಆರ್.ಮೊಹಲ್ಲಾದ ಬೀಡಿ ಕಾರ್ಮಿಕರ ಆಸ್ಪತ್ರೆ ಮತ್ತು ಕೆ.ಆರ್. ಎಸ್‌. ರಸ್ತೆಯಲ್ಲಿರುವ ಪಂಚಕರ್ಮ ಹೈಟೆಕ್ ಆಸ್ಪತ್ರೆಯಲ್ಲಿ ಈ “ಕೋವಿಡ್ ಮಿತ್ರ” ಸಲಹಾ ಕೇಂದ್ರಗಳು ಕಾರ್ಯ ನಿರ್ವಹಿಸಲಿದ್ದು ಈ ಮೂರು ಕೇಂದ್ರಗಳಿಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

 

ಕೋವಿಡ್ ಮಿತ್ರಕ್ಕೆ ಸಂಬಂಧಿಸಿದಂತೆ ಚಾಮರಾಜ ಕ್ಷೇತ್ರಕ್ಕೆ 0821-2519922,  ಕೃಷ್ಣರಾಜ ಕ್ಷೇತ್ರಕ್ಕೆ 0821-2517922, ನರಸಿಂಹರಾಜ ಕ್ಷೇತ್ರಕ್ಕೆ 0821-2517422 ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಕರೆ ಮಾಡಬಹುದಾಗಿದೆ.

 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಕ್ಷಯಾರೋಗ ನಿಯಂತ್ರಣಾಧಿಕಾರಿ ಡಾ. ಸಿರಾಜ್ ಅಹ್ಮದ್, ವೈದ್ಯರಾದ ಡಾ. ಸಂತೃಪ್ತ್, ಮತ್ತಿತರರು ಉಪಸ್ಥಿತರಿದ್ದರು.

By admin