ಚಾಮರಾಜನಗರ: ಕೋವಿಡ್ ಸೋಂಕು ವ್ಯಾಪಿಸದಂತೆ ತಡೆಯಲು ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಸೋಂಕಿತರನ್ನು ಶೀಘ್ರವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸೂಚನೆ ನೀಡಿದ್ದಾರೆ
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಇತರೆ ತಾಲೂಕುಗಳಿಗಿಂತ ಚಾಮರಾಜನಗರ ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿವೆ. ಸಾವಿನ ಸಂಖ್ಯೆಯು ಏರುತ್ತಲೆ ಇದೆ. ವಿಶೇಷವಾಗಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿದೆ. ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಮುಂದಾಗಬೇಕು. ಸೋಂಕು ಪ್ರಕರಣಗಳು ಹೆಚ್ಚಾಗಿರುವ ಗ್ರಾಮಗಳನ್ನು ಕಂಟೈನ್‌ಮೆಂಟ್ ವಲಯಗಳನ್ನಾಗಿ ಮಾಡಿ ಕಂಟೈನ್‌ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್ ಪರೀಕ್ಷೆಗಾಗಿ ಅಗತ್ಯ ವೈದ್ಯರು ಹಾಗೂ ಶುಶ್ರೂಷಕರನ್ನು ನೇಮಿಸಬೇಕು. ಕಂಟೈನ್‌ಮೆಂಟ್ ವಲಯಗಳಲ್ಲಿರುವ ನಿವಾಸಿಗಳಿಗೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಒದಗಿಸಿ ಅಲ್ಲಿರುವ ಜನರು ಕಂಟೈನ್‌ಮೆಂಟ್ ವಲಯದಿಂದ ಹೊರಬರದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗುತ್ತಿರುವುದರಿಂದ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ (ಎ ಸಿಂಪ್ಟಮ್ಯಾಟಿಕ್) ಆಯಾ ತಾಲೂಕುಗಳ ವಸತಿ, ಆಶ್ರಮ ಶಾಲೆ, ಹಾಸ್ಟೆಲ್‌ಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಆರೈಕೆ ಮಾಡಬೇಕು. ಹೋಂ ಐಸೊಲೇಷನ್‌ಗೆ ಅನುಕೂಲವಾದ ಸೌಲಭ್ಯ ಇರದಿದ್ದಲ್ಲಿ ಹತ್ತಿರದ ವಸತಿ ಶಾಲೆಗಳಲ್ಲಿನ ಕೋವಿಡ್ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕು. ಇದರಿಂದ ಸೋಂಕು ವ್ಯಾಪಿಸದಂತೆ ತಡೆಯಬಹುದಾಗಿದೆ ಎಂದರು.
ಚಾಮರಾಜನಗರದ ಸಿ.ಡಿ.ಎಸ್. ಸಮುದಾಯ ಭವನದಲ್ಲಿ ಆರಂಭಿಸಿರುವ ನಿರಾಶ್ರಿತರ ಪರಿಹಾರ ಕೇಂದ್ರ ಹಾಗೂ ಇಂದಿರಾ ಕ್ಯಾಂಟೀನ್‌ಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ ನೀವು ಇಲ್ಲಿಗೆ ಬಂದು ಎಷ್ಟು ದಿವಸಗಳಾಯಿತು? ನಿಮಗೆ ಇಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಸಮಯಕ್ಕೆ ಸರಿಯಾಗಿ ದೊರೆಯುತ್ತಿದೆಯೆ ಎಂದು ಅವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಆಶ್ರಯ ಕೇಂದ್ರದಲ್ಲಿರುವವರಿಗೆ ದಿನನಿತ್ಯ ನೀಡುತ್ತಿರುವ ತಿಂಡಿ, ಊಟದ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ನಿರಾಶ್ರಿತರಿಗೆ ಆಹಾರ ಹಾಗೂ ಬಟ್ಟೆಯನ್ನು ವಿತರಿಸಿದರು.