ಚಾಮರಾಜನಗರ: ಜಿಲ್ಲೆಯಲ್ಲಿ ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಸಾವಿನ ಪ್ರಮಾಣವೂ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸೋಮವಾರ ಬೆಳಗ್ಗೆ 9 ಗಂಟೆಯ ತನಕ 12 ಮಂದಿ ಸಾವನ್ನಪ್ಪಿದ್ದಾರೆ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.
24ಗಂಟೆ ಅವಧಿಯಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 12 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಚಾಮರಾಜನಗರ ತಾಲ್ಲೂಕಿನಲ್ಲಿ 6, ಯಳಂದೂರು ತಾಲ್ಲೂಕಿನಲ್ಲಿ 1, ಕೊಳ್ಳೇಗಾಲ ತಾಲ್ಲೂಕಿನಲ್ಲಿ 3, ಹನೂರು ತಾಲ್ಲೂಕಿನ 1, ಗುಂಡ್ಲುಪೇಟೆ 1 ಹೀಗೆ 12 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಚಾಮರಾಜನಗರ ಕೋವಿಡ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರ ತನಕ 8 ಮಂದಿ ಸಾವನ್ನಪ್ಪಿದ್ದು, ಚಾಮರಾಜನಗರ ತಾಲ್ಲೂಕಿನ 3 ಮಂದಿ, ಕೊಳ್ಳೇಗಾಲ ತಾಲ್ಲೂಕಿನ 3, ಯಳಂದೂರು ತಾಲ್ಲೂಕಿನ 1, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಭಾನುವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 9 ಗಂಟೆಯ ತನಕ 4 ಮಂದಿ ಸಾವನ್ನಪ್ಪಿದ್ದು, ಚಾಮರಾಜನಗರ ತಾಲ್ಲೂಕಿನ 3 ಮಂದಿ, ಹನೂರು ತಾಲ್ಲೂಕಿನ ಒಬ್ಬರು ಸಾವನ್ನಪ್ಪಿದ್ದಾರೆ.
24 ಗಂಟೆಯ ಅವಧಿಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಮೃತರಾದ 15 ಮಂದಿಯಲ್ಲಿ 7 ಮಂದಿ ಕೋವಿಡ್ ಸೋಂಕಿತರು ಸಾವನ್ನಪಿದರೆ,5 ಮಂದಿ ಕೋವಿಡ್ ಸೋಂಕಿನ ಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ವೈದ್ಯರು ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ 24 ಗಂಟೆಗಳ ಅಂತರದಲ್ಲಿ 12 ಮಂದಿ ಸಾವನ್ನಪ್ಪಿದ್ದು ಗಮನಿಸಿದರೆ ಕೋವಿಡ್ ಸೋಂಕು ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಿತಿ ಮೀರುತ್ತಿರುವುದು ಎದ್ದು ಕಾಣಿಸುತ್ತಿದೆ.
ಕೋವಿಡ್ ಸೋಂಕು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿಗೊಳಿಸುವ ಮೂಲಕ ಲಾಕ್ ಡೌನ್ ಗೆ ಮುಂದಾಗಿದೆ. ಇಷ್ಟೆಲ್ಲಾ ಕಟ್ಟೆಚ್ಚರ ಇದ್ದರೂ ಸಹ ಚಾಮರಾಜನಗರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣವೂ ಸಹ ಅಧಿಕವಾಗುತ್ತಿರುವುದನ್ನು ಗಮನಿಸಿದರೆ ಮುಂದೆ ನಿಯಂತ್ರಣ ಹೇಗೆ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಬಗ್ಗೆ ಹಾಗೂ ಸೋಂಕಿತರು ಸಾವನ್ನಪ್ಪುತ್ತಿರುವ ಸಂಖ್ಯೆ ಅಧಿಕವಾಗುತ್ತಿರುವ ಬಗ್ಗೆ ಜಿಲ್ಲೆಯ ಜನತೆ ತೀರಾ ಆತಂಕದಲ್ಲಿದ್ದಾರೆ. ಇನ್ನಾದರೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಸೋಂಕು ನಿಯಂತ್ರಣಕ್ಕೆ ಮುಂದಾಗುವುದು ಅಗತ್ಯವಾಗಿದೆ.

By admin