ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಕೆಳ ವರ್ಗದ ವಿವಿಧ ವಲಯಗಳ ಕಾರ್ಮಿಕರು. ರೈತರು, ನಿರ್ಗತಿಕರು, ದಿನಗೂಲಿ ನೌಕರರು ಸೇರಿದಂತೆ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಬಹಳಷ್ಟು ಮಂದಿ ಸರ್ಕಾರ ತಮಗೇನಾದರೂ ಪ್ಯಾಕೇಜ್ ಘೋಷಣೆ ಮಾಡುತ್ತದೆಯಾ ಎಂದು ಕಾಯುತ್ತಲೇ ಬಂದಿದ್ದರು. ಇದೀಗ ಸರ್ಕಾರ 1,250 ಕೋಟಿ ರೂ.ಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವುದು ತಕ್ಕ ಮಟ್ಟಿಗೆ ನೆಮ್ಮದಿ ತಂದಂತಾಗಿದೆ.
ಮುಖ್ಯ ಮಂತ್ರಿ ಬಿ.ಎಸ್‍.ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆ ನಡೆಸಿ ಅಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು ಅದರಂತೆ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರದಂತೆ ಸಹಾಯಧನ, ಹಣ್ಣು ಮತ್ತು ತರಕಾರಿ ಕನಿಷ್ಠ 1 ಹೆಕ್ಟೇರ್ ನಿಂದ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿಗಳಂತೆ ಧನಸಹಾಯ ಘೋಷಣೆ ಮಾಡಲಾಗಿದೆ.
ಇನ್ನು ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ, ಲೈಸೆನ್ಸ್ ಹೊಂದಿರುವವರಿಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ಚಾಲಕನಿಗೆ ತಲಾ 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ, -ಅಸಂಘಟಿತ ವಲಯ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ, -ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತಲಾ 2 ಸಾವಿರ ರೂಪಾಯಿ, ಕಲಾವಿದರು, ಕಲಾವಿದರ ತಂಡಗಳಿಗೆ ತಲಾ 3 ಸಾವಿರ ರೂಪಾಯಿ ಘೋಷಿಸಿದ್ದಾರೆ.
ರೈತರು, ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದಿರುವ ರೈತರ ಸಣ್ಣ ಮತ್ತು ಮಧ್ಯಮ ಗಾತ್ರದ ಸಾಲ ಮರುಪಾವತಿ ದಿನಾಂಕ 1.5.2020ರಿಂದ ಮರುಪಾವತಿ ಸಾಲದ ಕಂತಿನ ದಿನಾಂಕವನ್ನು 31.7.2021ರವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ಉಚಿತ 5 ಕೆಜಿ ಅಕ್ಕಿ, ಪಡಿತರ ಫಲಾನುಭವಿಗಳಿಗೂ ಆಹಾರ ಧಾನ್ಯ ವಿತರಣೆ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಮೇ ಮತ್ತು ಜೂನ್ ತಿಂಗಳಲ್ಲಿ ಅವರಿಗೂ ಉಚಿತ ಆಹಾರ ಧಾನ್ಯ ನೀಡಲಾಗುತ್ತದೆ. ನಗರ ಪ್ರದೇಶಗಳ ಕಾರ್ಮಿಕರು ಮತ್ತು ಬಡವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ, -ಕೋವಿಡ್ ಸೋಂಕಿತರಿಗೆ ಸರ್ಕಾರ ನಿಯೋಜಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ.

By admin