ಚಾಮರಾಜನಗರ: ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಸೋಂಕಿತರ ಸಾವಿನ ಹಿಂದಿನ ಕಥೆಗಳು ಕರುಣಾಜನಕವಾಗುತ್ತಿವೆ.
ಮನುಷ್ಯ ಶಾಶ್ವತವಲ್ಲ ಯಾವತ್ತಾದರೂ ಒಂದು ದಿನ ಸಾಯಲೇ ಬೇಕಾಗಿದೆ. ಆದರೆ ನಾಳೆ ಬರಬೇಕಾದ ಸಾವು ಇವತ್ತೇ ಕೊರೋನಾ ಮೂಲಕ ಬರುತ್ತಿದ್ದು, ನೋಡನೋಡುತ್ತಲೇ ಪ್ರಾಣಪಕ್ಷಿ ಹಾರಿಹೋಗುತ್ತಿರುವುದರಿಂದ ಕುಟುಂಬವನ್ನು ನಂಬಿದವರು ಕಂಗಾಲಾಗಿದ್ದಾರೆ.

ಕೊರೋನಾ ಸೋಂಕಿಗೆ ಹೆದರಿ ಸಾಯುವಂತಾಗಿದೆ
ಒಂದೆಡೆ ಸೋಂಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಸಹಜವಾಗಿ ಸಾವನ್ನಪ್ಪಿದರೂ ಕೊರೋನಾ ಎಂದು ಹೆದರಿ ಜನ ಹತ್ತಿರ ಬರುತ್ತಿಲ್ಲ. ಈ ನಡುವೆ ಅಪ್ಪ ಅಮ್ಮನ ಕಳೆದುಕೊಂಡು ಮಕ್ಕಳು ತಬ್ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ಹೆತ್ತವರ ಕಣ್ಣಮುಂದೆಯೇ ಮಕ್ಕಳು ಬಲಿಯಾಗುತ್ತಿದ್ದಾರೆ. ಕೊರೋನಾ ತಂದೊಡ್ಡಿದ ಭಯಾನಕತೆ ಮತ್ತು ಹೃದಯ ವಿದ್ರಾವಕತೆ ಯಾರಿಗೂ ಬೇಡಪ್ಪಾ ಎನ್ನುವಂತಾಗಿದೆ. ಇದೆಲ್ಲವನ್ನು ಗಮನಿಸುವ ಜನ ಇನ್ನಾದರೂ ಲಾಕ್ ಡೌನ್ ಗೆ ಸ್ಪಂದಿಸಿ ಮನೆಯಲ್ಲಿಯೇ ಇದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

ವ್ಯಕ್ತಿ ಸೋಂಕಿಗೆ ಹೆದರಿ ಆತ್ಮಹತ್ಯೆ
ಇಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿದರೆ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ 45 ವರ್ಷದ ಸೋಂಕಿತ ವ್ಯಕಿಯೊಬ್ಬನಿಗೆ ಮೇ.೬ ರಂದು ಕೊರೋನಾ ಸೋಂಕು ದೃಢಪಟ್ಟಿತ್ತು ಬಳಿಕ ಮನೆಯ ಮೂವರು ಸದಸ್ಯರೂ ಸೋಂಕಿತರಾಗಿದ್ದರು. ಇದರಿಂದ ಬೇಸರಗೊಂಡ ಆತ ಮನೆಯಿಂದ ನಾಪತ್ತೆಯಾಗಿದ್ದನು. ಬಳಿಕ ಆತ ಪತ್ತೆಯಾಗಿದ್ದು ಕುಂಭೇಶ್ವರ ಕಾಲೋನಿಯ ಕೆರೆಯಲ್ಲಿ ಶವವಾಗಿ. ಈತ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ತಂದೆ ಮಕ್ಕಳಿಬ್ಬರು ಸಾವು ಕುಟುಂಬ ಅತಂತ್ರ
ಇನ್ನೊಂದೆಡೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಸೋಂಕಿತ ತಂದೆ-ಮಕ್ಕಳಿಬ್ಬರು ಒಂದು ದಿನದ ಅಂತರದಲ್ಲಿ ಮೃತಪಟ್ಟಿದ್ದಾರೆ. ಗ್ರಾಮದ 69 ವರ್ಷದ ಸೋಂಕಿತರೊಬ್ಬರು ಹೋಂ ಐಸೋಲೇಷನ್ ನಲ್ಲಿದ್ದು ಶುಕ್ರವಾರ ಮೃತಪಟ್ಟಿದ್ದರು. ಇವರ ಮಗ 49 ವರ್ಷದವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ. ಈ ನಡುವೆ ಇನ್ನೊಬ್ಬ ಮಗನ ಸ್ಥಿತಿಯೂ ಗಂಭೀರವಾಗಿ ಆತನೂ ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದ್ದರಿಂದ ಇಡೀ ಕುಟುಂಬ ದಿಕ್ಕು ಕಾಣದೆ ಅತಂತ್ರವಾಗಿದೆ.

ಅಪ್ಪ ಅಮ್ಮನ ಸಾವಿನಿಂದ ಮಗಳು ಅನಾಥೆ
ಇನ್ನೊಂದೆಡೆ ಚಾಮರಾಜನಗರ ತಾಲೂಕು ಕೊತ್ತಲವಾಡಿ ನಿವಾಸಿ ಗುರುಪ್ರಸಾದ್ ಹಾಗೂ ಅವರ ಪತ್ನಿ ರಶ್ಮಿ ಕೋವಿಡ್‌ನಿಂದ ಸಾವನ್ನಪ್ಪಿದ್ದು ಅವರ ಮಗು ಅನಾಥವಾಗಿದೆ. ಕೊರೊನಾ ಸೋಂಕಿನಿಂದ ಗಂಡ-ಹೆಂಡತಿ ಇಬ್ಬರೂ ಹೋಂ ಐಸೋಲೇಷನ್ನಲ್ಲಿದ್ದರು. ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಹೋಂ ಐಸೋಲೇಷನ್ ನಲ್ಲಿದ್ದ ಗುರುಪ್ರಸಾದ್ ಪತ್ನಿ ರಶ್ಮಿ ಭಾನುವಾರ ರಾತ್ರಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ದಂಪತಿ ಮಗಳು ಸುಧಾರಾಣಿ ಅಜ್ಜಿಯ ಆರೈಕೆಯಲ್ಲಿದ್ದರು. ಈಗ ಅಜ್ಜಿಗೂ ಸೋಂಕು ತಗುಲಿದೆ ಆತಂಕಕ್ಕೆ ಕಾರಣವಾಗಿದೆ.

ಶವದ ಬಳಿಗೂ ಸುಳಿಯದ ಜನ
ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಏಕಾಂಗಿಯಾಗಿದ್ದ ತರಕಾರಿ ವ್ಯಾಪಾರಿ ಮಹಾದೇವ (60) ಎಂಬುವರು ಮೂರು ದಿನ ಜ್ವರದಿಂದ ಬಳಲುತ್ತಿದ್ದರು. ಅವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರಲಿಲ್ಲ. ಆದರೆ ಅವರಿಗೆ ಸೋಂಕು ತಗುಲಿದೆ ಎಂದೇ ಗ್ರಾಮಸ್ಥರು ಭಾವಿಸಿದ್ದರು. ಆತ ಸಾವನ್ನಪ್ಪಿದರೂ ಅಂತ್ಯಸಂಸ್ಕಾರಕ್ಕೆ ಮುಂದಾಗಲಿಲ್ಲ. ಆತನ ಅಣ್ಣನ ಮಗ ಇದರಿಂದ ಕಂಗಾಲಾಗಿದ್ದು, ಸ್ಥಳೀಯ ಪಿಎಫ್‌ಐ ಸಂಘಟನೆಯ ಯುವಕರು ಬೈಕ್ ನಲ್ಲಿ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಮೇಲೆಯೇ ಹಲ್ಲೆ
ಇದೆಲ್ಲದರ ನಡುವೆ ಕೆಲವು ಸೋಂಕಿತರ ಕಡೆಯವರು ಆಸ್ಪತ್ರೆ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ್ ಹಾಗೂ ಸ್ಟಾಫ್ ನರ್ಸ್ ಉಮಾದೇವಿ ಅವರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದರಿಂದ ಆಕ್ರೋಶಗೊಂಡ ರೋಗಿಯ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
-ಬಿ.ಎಂ.ಲವಕುಮಾರ್

By admin