ಚಾಮರಾಜನಗರ : ಕೊರೊನಾ ಸೋಂಕು ಎರಡನೇ ಅಲೆಯಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲೇ ಹೆಚ್ಚು ವ್ಯಾಪಿಸಿದ್ದರೂ ಜಿಲ್ಲೆಯಲ್ಲಿ 174 ಹಳ್ಳಿಗಳು ಕೊರೋನಾ ಮುಕ್ತವಾಗಿವೆ.

ವಿಶೇಷ ಎಂದರೆ ಬುಡಕಟ್ಟು ಸೋಲಿಗರೇ ವಾಸಿಸುವ ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಚಾಮರಾಜನಗರ ತಾಲೂಕಿನ 61, ಹನೂರು ತಾಲೂಕಿನ 65, ಗುಂಡ್ಲುಪೇಟೆ ತಾಲೂಕಿನ 24, ಕೊಳ್ಳೇಗಾಲ ತಾಲೂಕಿನ 16 ಹಾಗೂ ಯಳಂದೂರು ತಾಲೂಕಿನ 9 ಹಳ್ಳಿಗಳಲ್ಲಿ ಪ್ರಸ್ತುತ ದಿನದವರೆಗೂ ಯಾವುದೇ  ಕೊರೋನಾ ಪ್ರಕರಣ ವರದಿಯಾಗಿಲ್ಲ ಎಂದು ಸರ್ಕಾರಕ್ಕೆ ಕಳುಹಿಸಲಾದ ವರದಿಯಲ್ಲಿ ತಿಳಿಸಲಾಗಿದೆ.ಚಾಮರಾಜನಗರ ತಾಲೂಕಿನ 61 ಗ್ರಾಮಗಳು ಕೊರೋನಾಮುಕ್ತವಾಗಿದ್ದು,  ಅದರಲ್ಲಿ  ಕಾಡಂಚಿನಲ್ಲಿರುವ ಪುಣಜನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಡಕಟ್ಟು ಸೋಲಿಗರೇ ಇರುವ ಬೆಜ್ಜಲಪಾಳ್ಯ, ಬಾನವಾಡಿ, ಎತ್ತೆಗೌಡನದೊಡ್ಡಿ, ಕನ್ನೇರಿಕಾಲೋನಿ, ಶ್ರೀನಿವಾಸಪುರ ಕಾಲೋನಿ ಸೇರಿದಂತೆ 20 ಕ್ಕೂ ಹೆಚ್ಚು ಗಿರಿಜನರ ಹಾಡಿಗಳು ಕೊರೋನಾ ಮುಕ್ತವಾಗಿವೆ. ಇನ್ನೂ ಹನೂರು ತಾಲೋಕಿನಲ್ಲಿ 65ಗ್ರಾಮಗಳು ಕೋವಿಡ್-19 ಗೆ ಸೆಡ್ಡು ಹೊಡೆದಿದ್ದು, ಇಲ್ಲಿಯು ಸಹ ಕಾಡಂಚಿನ ಗ್ರಾಮಗಳು ಹಾಗೂ ಗಿರಿಜನರು ವಾಸಿಸುವ ಹಳ್ಳಿಗಳೇ  ಹೆಚ್ಚಾಗಿ ಕೊರೋನಾ ಮುಕ್ತವಾಗಿವೆ. ಹಾಗೆಯೇ ಯಳಂದೂರು ತಾಲೂಕಿನಲ್ಲಿ 9 ಹಳ್ಳಿಗಳು ಕೊರೋನಾ ವೈರಸ್ ನಿಂದ ಮುಕ್ತವಾಗಿದ್ದು ಇಲ್ಲಿಯು ಸಹ ಕಾಡಂಚಿನ ಹಾಗು ಬುಡಕಟ್ಟು ಸೋಲಿಗರೇ ಇರುವ ಗ್ರಾಮಗಳು ಮೇಲುಗೈ ಸಾಧಿಸಿವೆ.

ಗುಂಡ್ಲುಪೇಟೆ ತಾಲೂಕಿನ 24 ಹಳ್ಳಿಗಳು ಹಾಗು ಕೊಳ್ಳೇಗಾಲ ತಾಲೂಕಿನ 15 ಗ್ರಾಮಗಳಲ್ಲಿ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಇಲ್ಲಿಯು ಸಹ ಕಾಡಂಚಿನ ಗ್ರಾಮಗಳೇ ಹೆಚ್ಚಾಗಿ ಕೋವಿಡ್ -19 ನಿಂದ ಮುಕ್ತವಾಗಿವೆ. ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲು ಕೊರೋನಾ ಸೋಂಕು ಹಬ್ಬಿದ್ದರೂ ಈ ನಡುವೆಯು 174 ಗ್ರಾಮಗಳು ಸದ್ಯಕ್ಕೆ ಕೊರೋನಾಮುಕ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

 

By admin