ಗುಂಡ್ಲುಪೇಟೆ: ತಾಲ್ಲೂಕು ಕುರುಬ ಜನಾಂಗದವರು ವೈಮನಸ್ಸು ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಿದಾಗ ಸಂಘಟನೆ ಮತ್ತು ಜನಾಂಗ ಮುಂದಿವರೆಯಲು ಸಾಧ್ಯ ಎಂದು ಕುರುಬ ಸಮುದಾಯದ ಮುಖಂಡ ಗೋಪಾಲಣ್ಣ ತಿಳಿಸಿದರು.
ಪಟ್ಟದ ಕನಕ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಕುರುಬರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ತೀರ ಹಿಂದುಳಿದ ಜನಾಂಗವಾಗಿದ್ದು, ಜನಾಂಗದ ಏಳಿಗೆಗೆ ಸಂಘಟನೆ ಅತ್ಯಗತ್ಯ. ಇದನ್ನು ಮನಗಂಡು ಸಂಘದಲ್ಲಿ ಪ್ರತ್ಯೇಕ ಬಣಗಳನ್ನು ಹುಟ್ಟು ಹಾಕದೇ ಎಲ್ಲರೂ ಒಗ್ಗಟ್ಟಾಗಿ ತಾಲ್ಲೂಕು ಕುರುಬರ ಸಂಘವನ್ನು ಮುನ್ನಡೆಸಿ ಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಕುರುಬರ ಸಂಘದ ಅಧ್ಯಕ್ಷ ಜಿ.ಎಲ್.ರಾಜು ಮಾತನಾಡಿ, ತಾಲೂಕಿನಲ್ಲಿ ಕುರುಬ ಜನಾಂಗ ದವರ ಸಂಘಟನೆ (ಸಂಘ) ಅಸ್ತಿತ್ವಕ್ಕೆ ತಂದು ಹಲವಾರು ವರ್ಷಗಳೇ ಕಳೆದು ಹೋಗಿದ್ದು, ಈಗಾಗಲೇ ಕುರುಬ ಜನಾಂಗದ ಸಂಘಟನೆ ಮೂಲಕ ರಾಜಕೀಯ ನಾಯಕರ ಮೇಲೆ ಒತ್ತಡ ಹೇರಿ ಲಕ್ಷಾಂತರ ರೂ. ಅನುದಾನ ಪಡೆದು ಸುಸಜ್ಜಿತ ಕನಕ ಭವನವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ತಾಲ್ಲೂಕಿನಾದ್ಯಂತ ಕುರುಬ ಸಮುದಾಯದವರನ್ನು ಸಂಘಟನೆಯಲ್ಲಿ ಒಗ್ಗೂಡಿಸಿ ಜನಾಂಗ ಏಳಿಗೆಗೆ ಕೆಲಸ ಮಾಡುತ್ತಿದೆ ಎಂದರು.
ಮುಂದಿನ ದಿನದಲ್ಲಿ ತಾಲೂಕಿನಾದ್ಯಂತ ಪ್ರವಾಸ ಮಾಡುವ ಮೂಲಕ ಎಲ್ಲಿಲ್ಲಿ ಕುರುಬ ಸಮುದಾಯದವರರನ್ನು ಹೊಸದಾಗಿ ಸಂಘಕ್ಕೆ ಸೆರ್ಪಡೆ ಮಾಡುವ ಮೂಲಕ ಸಂಘದ ನೋಂದಣಿ ಮಾಡುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯರಾದ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಇತ್ತೀಚಿಗೆ ಮಾಜಿ ಪುರಸಭಾ ಅಧ್ಯಕ್ಷರಾದ ಎಲ್.ಸುರೇಶ್ ಒಂದು ಗುಂಪು ಕಟ್ಟಿಕೊಂಡು ಕುರುಬ ಜನಾಂಗವನ್ನು ಇಬ್ಬಾಗ ಮಾಡಲು ಹೊರಟ್ಟಿದ್ದಾರೆ. ಅಲ್ಲದೇ ಸ್ವತಃ ತಾವೇ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂದು ಸ್ವಯಂ ಘೋಷಣೆ ಮಾಡಿಕೊಂಡು ಹಾಲಿ ಇರುವ ಕುರುಬ ಸಂಘವನ್ನು ಒಡೆಯಲು ಮುಂದಾಗಿದ್ದು, ಜನಾಂದವರು ಇದಕ್ಕೆ ಮನ್ನಣೆ ನೀಡದೇ ಎಲ್ಲರೂ ನಮ್ಮೊಂದಿಗೆ ಇರಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕುರುಬ ಜನಾಂಗ ಮುಖಂಡರಾದ ಸ್ವಾಮಿಗೌಡ, ಬಸವರಾಜು, ಶಾಮಣ್ಣ ಮೇಷ್ಟ್ರು, ಎಸ್.ಅರ್.ರಾಜಶೇಖರ, ಶಿವಣ್ಣ, ಯುವಕರಾದ ಕಲಿಗೌಡನಹಳ್ಳಿ ಸುರೇಶ, ಗರಗನಹಳ್ಳಿ ಮಹೇಂದ್ರ, ಪಟ್ಟಣದ ಅರುಣ್, ಸಂದೀಪ್ ಸೇರಿದಂತೆ ಜನಾಂಗದವರು ಭಾಗವಹಿಸಿದ್ದರು.
ವರದಿ: ಬಸವರಾಜು ಎಸ್ ಹಂಗಳ