ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ವಾಹನದಟ್ಟಣೆ ನಿಯಂತ್ರಣಕ್ಕಾಗಿ ಅವಶ್ಯವಿರುವ ಸ್ಥಳಗಳಲ್ಲಿ ಸರ್ಕಾರ ಜಾಗ ಒದಗಿಸಿದರೆ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲಾಕೇಂದ್ರ ಸೇರಿದಂತೆ ಇತರೆಡೆ ವಾಹನದಟ್ಟಣೆ ಅಧಿಕವಾಗುತ್ತಿದ್ದು, ಲಾರಿಗಳು ಸೇರಿದಂತೆ ಇತರೆ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಟ್ರಕ್ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಚಾಮರಾಜನಗರ ತಾಲೂಕಿನ ಶಿವಪುರದ ಬಳಿ, ಬದನಗುಪ್ಪೆ-ಕೆಲ್ಲಂಬಳ್ಳಿಯ ಕೈಗಾರಿಕಾ ಪ್ರದೇಶ, ಸತ್ತಿ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಸ್ಥಳ ಯೋಗ್ಯವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ರೀತಿ ಜಿಲ್ಲೆಯ ಹಲವು ಕಡೆಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಹಣ ಲಭ್ಯವಿದ್ದು, ಸರ್ಕಾರದ ವತಿಯಿಂದ ಭೂಮಿ ನೀಡಿದರೆ ೩ ತಿಂಗಳಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ರಸ್ತೆಬದಿಗಳಲ್ಲಿ ನಿಲ್ಲಿಸುವ ಲಾರಿಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಕ್ ಟರ್ಮಿನಲ್‌ನಲ್ಲಿ ಪ್ರಮುಖವಾಗಿ ಪೆಟ್ರೋಲ್ ಬಂಕ್, ಡಾಮೆಂಟರಿ, ಬ್ಯಾಂಕ್, ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒಂದೇಕಡೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ೩೦-೪೦ ಎಕರೆ ಜಾಗ ಬೇಕು. ಬೆಂಗಳೂರಿನ ಯಶವಂತಪುರದಲ್ಲಿ ನಿರ್ಮಿಸಿರುವ ಟ್ರಕ್ ಟರ್ಮಿನಲ್ ನಿರ್ಮಾಣದಿಂದ ೨ ಸಾವಿರ ಲಾರಿಗಳು ಸೇರಿದಂತೆ ಇತರೆ ವಾಹನಗಳನ್ನು ನಿಲ್ಲಿಸಬಹುದಾಗಿದ್ದು, ಜಿಲ್ಲೆಯಲ್ಲಿಯೂ ಅದೇ ಮಾದರಿಯ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜಿಲ್ಲೆಯ ೪-೫ ಕಡೆಗಳಲ್ಲಿ ಟ್ರಕ್ ಟರ್ಮಿನಲ್ ಸಹ ನಿರ್ಮಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಟ್ರಕ್ ಟರ್ಮಿನಲ್‌ನಲ್ಲಿ ಗೋಡೌನ್ ವ್ಯವಸ್ಥೆ ಸಹ ಮಾಡಲಾಗುವುದು. ಉಚಿತವಾಗಿ ಭೂಮಿಯನ್ನು ನೀಡಿದರೆ ೬ ತಿಂಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ವೀರಯ್ಯ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ್, ಇತರರು ಸುದ್ದಿಗೋಷ್ಟಿಯಲ್ಲಿ ಇದ್ದರು.
